ಚೆಟ್ಟಳ್ಳಿಯಲ್ಲಿ ಹುಲಿ ಸಾವು ಪ್ರಕರಣ: ಅಕ್ರಮ ಉರುಳು, ದುಷ್ಕರ್ಮಿಗಳಿಗಾಗಿ ಶೋಧ

Dec 17, 2025 - 22:26
Dec 18, 2025 - 09:27
 0  853
ಚೆಟ್ಟಳ್ಳಿಯಲ್ಲಿ ಹುಲಿ ಸಾವು ಪ್ರಕರಣ: ಅಕ್ರಮ ಉರುಳು, ದುಷ್ಕರ್ಮಿಗಳಿಗಾಗಿ ಶೋಧ

ಮಡಿಕೇರಿ, ಡಿ.17: ಕಾಡುಹಂದಿ ಸೆರೆಗೆ ಅಕ್ರಮವಾಗಿ ಹಾಕಲಾಗಿದ್ದ ಉರುಳಿಗೆ ಸಿಲುಕಿ ರಾಷ್ಟ್ರ ಮೃಗವಾದ ಹುಲಿ ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಶ್ರೀಮಂಗಲ ಕೆಚ್ಚೆಟ್ಟೀರ ಕಾಫಿ ತೋಟದಲ್ಲಿ ಮಂಗಳವಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉರುಳು ಹಾಕಿದವರ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಂಗಳವಾರ ಶ್ರೀಮಂಗಲ ಗ್ರಾಮದ ಎಸ್ಟೇಟ್ ರಸ್ತೆ ಬದಿಯಲ್ಲಿ ಹುಲಿಯ ಶವ ಪತ್ತೆಯಾಗಿತ್ತು.ಪ್ರಾಥಮಿಕ ತನಿಖೆಯ ಪ್ರಕಾರ, ಹುಲಿ ಬೇರೆ ಪ್ರದೇಶದಲ್ಲಿ ಉರುಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು, ನರಳುತ್ತಾ ಈ ಭಾಗಕ್ಕೆ ಬಂದಿದ್ದು, ಅಲ್ಲಿಯೇ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.

ಉರುಳು ಹಾಕಿದ್ದ ಸ್ಥಳವನ್ನು ಪತ್ತೆಹಚ್ಚಲು ನಾಗರಹೊಳೆ ಅರಣ್ಯದಿಂದ ‘ಸ್ಟೆಲ್ಲಾ’ ಎಂಬ ವಿಶೇಷ ತರಬೇತಿ ಪಡೆದ ಸ್ನಿಫರ್ ನಾಯಿಯನ್ನು ಕರೆತರಲಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಗೋಪಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಸಂಜೆಯವರೆಗೆ ಉರುಳಿನ ನಿಖರ ಸ್ಥಳ ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಉರುಳಿನ ಮೂಲ ಸ್ಥಳ ಪತ್ತೆಯಾದ ಬಳಿಕ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವನ್ನಪ್ಪಿದ ಹುಲಿ ಸುಮಾರು 7ರಿಂದ 8 ವರ್ಷ ವಯಸ್ಸಿನ ಗಂಡು ಹುಲಿಯಾಗಿದ್ದು, ಇದಕ್ಕೆ ಇನ್ನೂ ಗುರುತು ಸಂಖ್ಯೆ (ಐಡಿ) ನೀಡಲಾಗಿರಲಿಲ್ಲ. ಈ ಹುಲಿ ಸುಮಾರು ಆರು ಕಿಲೋಮೀಟರ್ ದೂರದ ಮೀನುಕೊಲ್ಲಿ ಅರಣ್ಯದಿಂದ ಬಂದು ದುಬಾರೆ ಅರಣ್ಯದತ್ತ ಸಾಗುತ್ತಿದ್ದಿರಬಹುದೆಂದು ಅಂದಾಜಿಸಲಾಗಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಜಿಂಕೆಯ ಹಸಿ ಮಾಂಸ ಪತ್ತೆಯಾಗಿದ್ದು, ಸಾವಿಗೆ ಒಂದು ದಿನ ಮುನ್ನ ಅದು ಜಿಂಕೆ ಬೇಟೆಯಾಡಿದ್ದುದನ್ನು ಇದು ಸೂಚಿಸುತ್ತದೆ. ಚೇರಳ–ಶ್ರೀಮಂಗಲ ಗ್ರಾಮದ ಬೆಟ್ಟ ಪ್ರದೇಶವನ್ನು ಹುಲಿ ಸಂಚಾರ ಮಾರ್ಗ (ಕಾರಿಡಾರ್) ಎಂದು ಸ್ಥಳೀಯರು ಗುರುತಿಸಿದ್ದು, ಕಳೆದ ಹತ್ತು ದಿನಗಳಿಂದ ಈ ಹುಲಿ ಈ ಭಾಗದಲ್ಲಿ ಸಂಚರಿಸುತ್ತಿದ್ದುದಾಗಿ ತಿಳಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0