ಮಕ್ಕಳಿಗೆ ನೀಡುವ ಕೋಲ್ಡ್ರಿಫ್ ಸಿರಪ್‌ ನಲ್ಲಿ ವಿಷಕಾರಿ ರಾಸಾಯನಿಕ ಪತ್ತೆ; ಮಾರಾಟಕ್ಕೆ ನಿಷೇಧ

Oct 4, 2025 - 19:02
 0  350
ಮಕ್ಕಳಿಗೆ ನೀಡುವ ಕೋಲ್ಡ್ರಿಫ್ ಸಿರಪ್‌ ನಲ್ಲಿ ವಿಷಕಾರಿ ರಾಸಾಯನಿಕ ಪತ್ತೆ; ಮಾರಾಟಕ್ಕೆ ನಿಷೇಧ
Photo credit: INDIA TODAY

ಛಿಂದ್ವಾರಾ, ಅ.4: ಛಿಂದ್ವಾರಾ ಜಿಲ್ಲೆಯಲ್ಲಿ ಒಂಭತ್ತು ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಮಾದರಿಗಳಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಎಂಬ ಅತ್ಯಂತ ವಿಷಕಾರಿ ರಾಸಾಯನಿಕದ ಅಸ್ತಿತ್ವ ದೃಢಪಟ್ಟ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರವು ಸಿರಪ್‌ನ ಮಾರಾಟ ಮತ್ತು ವಿತರಣೆಗೆ ತಕ್ಷಣದಿಂದಲೇ ನಿಷೇಧ ಹೇರಿದೆ.

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಸ್ರೆಸನ್ ಫಾರ್ಮಾಸ್ಯುಟಿಕಲ್ ಕಂಪೆನಿಯು ತಯಾರಿಸಿದ ಈ ಸಿರಪ್‌ನ್ನು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು ಅಕ್ಟೋಬರ್ 2ರಂದು ನಡೆಸಿದ ಪರೀಕ್ಷೆಯ ಆಧಾರದ ಮೇಲೆ “ಪ್ರಮಾಣಿತವಲ್ಲದ ಹಾಗೂ ದೋಷಯುಕ್ತ (NSQ)” ಎಂದು ಗುರುತಿಸಿದೆ.

ಮಧ್ಯಪ್ರದೇಶ ಸರ್ಕಾರವು ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ತಮಿಳುನಾಡು ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ವಿನಂತಿಸಿತ್ತು. ಶುಕ್ರವಾರ ಬೆಳಿಗ್ಗೆ ತನಿಖಾ ವರದಿ ರಾಜ್ಯ ಸರ್ಕಾರಕ್ಕೆ ಬಂದ ನಂತರ ನಿಷೇಧದ ನಿರ್ಧಾರ ಕೈಗೊಳ್ಳಲಾಯಿತು. ಇದೇ ಕಂಪೆನಿಯು ತಯಾರಿಸಿದ ಇತರ ಔಷಧಗಳಿಗೂ ನಿಷೇಧ ವಿಸ್ತರಿಸಲಾಗಿದೆ.

ಪರೀಕ್ಷಾ ವರದಿ ಪ್ರಕಾರ, ಕೋಲ್ಡ್ರಿಫ್ ಸಿರಪ್‌ ನ ಮಾದರಿಯಲ್ಲಿ 48.6% ಡೈಥಿಲೀನ್ ಗ್ಲೈಕಾಲ್ (w/v) ಪತ್ತೆಯಾಗಿದೆ. ಈ ರಾಸಾಯನಿಕವು ತೀವ್ರ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುವ ಮಟ್ಟದ ವಿಷಕಾರಿ ಪದಾರ್ಥವಾಗಿದೆ. ಅಧಿಕಾರಿಗಳು ಈ ಔಷಧವನ್ನು “ಮಾನವ ಸೇವನೆಗೆ ಸಂಪೂರ್ಣ ಅಸುರಕ್ಷಿತ” ಎಂದು ಘೋಷಿಸಿದ್ದಾರೆ.

 ರಾಜ್ಯ ಔಷಧ ನಿಯಂತ್ರಕರು ಸಿರಪ್‌ ನ ಮಾರಾಟ, ವಿತರಣೆ ಹಾಗೂ ಬಳಕೆಯನ್ನು ತಕ್ಷಣದಿಂದಲೇ ನಿಲ್ಲಿಸಲು ಸೂಚಿಸಿದ್ದಾರೆ. ಲಭ್ಯವಿರುವ ಎಲ್ಲಾ ದಾಸ್ತಾನುಗಳನ್ನು ಸೀಲ್ ಮಾಡಿ, ಮುಂದಿನ ಸೂಚನೆಗಳವರೆಗೆ ನಾಶಪಡಿಸಬಾರದು ಅಥವಾ ಮಾರಾಟ ಮಾಡಬಾರದು ಎಂದು ಆದೇಶಿಸಲಾಗಿದೆ. ರಾಜ್ಯದಾದ್ಯಂತ ಹೆಚ್ಚುವರಿ ಮಾದರಿಗಳನ್ನು ಸಂಗ್ರಹಿಸಿ ಸರ್ಕಾರಿ ಪರೀಕ್ಷಾ ಪ್ರಯೋಗಾಲಯಗಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ.

 ಇದೇ ವೇಳೆ, ತಮಿಳುನಾಡು ಸರ್ಕಾರವು ಕೂಡ ಅಕ್ಟೋಬರ್ 1ರಿಂದ ಕೋಲ್ಡ್ರಿಫ್ ಸಿರಪ್ ಮಾರಾಟವನ್ನು ನಿಷೇಧಿಸಿದೆ. ಮಧ್ಯಪ್ರದೇಶದಲ್ಲಿ ಒಂಭತ್ತು, ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ರಾಜಸ್ಥಾನದಲ್ಲಿ ಒಬ್ಬ ಸೇರಿದಂತೆ ಒಟ್ಟು 12 ಮಕ್ಕಳ ಸಾವಿಗೆ ಈ ಸಿರಪ್ ಕಾರಣವಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಾಥಮಿಕ ತನಿಖೆಗಳ ಪ್ರಕಾರ, ಕೋಲ್ಡ್ರಿಫ್ ಸೇವನೆಯ ನಂತರ ಮಕ್ಕಳು ಅಸ್ವಸ್ಥರಾಗಿದ್ದರೆಂಬ ಮಾಹಿತಿ ದೃಢಪಟ್ಟಿದೆ. ಈಗಾಗಲೇ ಸಿರಪ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಯಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಕಂಪೆನಿ ಹಾಗೂ ಅದರ ಇತರ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ತಮಿಳುನಾಡು ಸರ್ಕಾರದಿಂದ ಬಂದ ತನಿಖಾ ವರದಿ ಸ್ವೀಕರಿಸಿದ ತಕ್ಷಣ ಕ್ರಮ ಜರುಗಿಸಲಾಗಿದೆ,” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0