ವಿರಾಜಪೇಟೆ ಗಡಿಯಾರ ಕಂಬದಿಂದ ಖಾಸಗಿ ಬಸ್ಸು ನಿಲ್ದಾಣದವರೆಗೆ ಏಕಮುಖ ಸಂಚಾರವೇ ಇರಲಿ;ವರ್ತಕರ ಸಂಘ ಒತ್ತಾಯ
ವಿರಾಜಪೇಟೆ:ವಿರಾಜಪೇಟೆ ಗಡಿಯಾರ ಕಂಬದಿಂದ ಖಾಸಗಿ ಬಸ್ಸು ನಿಲ್ದಾಣದವರೆಗೆ ಏಕಮುಖ ಸಂಚಾರವೇ ಇರಲಿ. ಅಭಿವೃದ್ಧಿ ಹೆಸರಿನಲ್ಲಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಿದರೆ ವರ್ತಕರಿಗೆ ವ್ಯಾಪಾರ ವಹಿವಾಟು ಸಮಸ್ಯೆಯಾಗುತ್ತದೆ ಎಂದು 200ಕ್ಕೂ ಅಧಿಕ ಮಂದಿ ವರ್ತಕರು ಸಾಮೂಹಿಕವಾಗಿ ಸಭೆ ನಡೆಸಿ ವಿರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ವಿರಾಜಪೇಟೆಯ ಹಿಲ್‌ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ವರ್ತಕರ ಸಭೆಯಲ್ಲಿ ರಸ್ತೆ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಅಭಿವೃದ್ಧಿಯ ಜೊತೆಗೆ ಏಕಮುಖ ಸಂಚಾರ ವ್ಯವಸ್ಥೆ ಇದ್ದು ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ವರ್ತಕರು ಹಾಗೂ ಮಾಲೀಕರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲುಗಡೆ ಮಾಡದೆ ಸಹಕರಿಸುವಂತೆ ತೀರ್ಮಾನಿಸಲಾಯಿತು.
ವಿರಾಜಪೇಟೆ ವರ್ತಕ, ವಿರಾಜಪೇಟೆ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ ದ್ವಿಮುಖ ಸಂಚಾರ ಮಾಡುವುದು, ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ ಎಂಬ ವಿಚಾರಕ್ಕೆ ಸಭೆ ಸೇರಿ ಒಮ್ಮತದ ತೀರ್ಮಾನ ತೆಗೆದುಕೊಂಡು ಗಡಿಯಾರ ಕಂಬದಿಂದ ಖಾಸಗಿ ಬಸ್ ನಿಲ್ದಾಣದ ರಸ್ತೆಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಅಂಗಡಿ ಮಾಲೀಕರು ತಮ್ಮ ವಾಹನವನ್ನು ನಿಲುಗಡೆ ಮಾಡದಂತೆ ತೀರ್ಮಾನ ತೆಗೆದುಕೊಂಡಿದ್ದೇವೆ, ವ್ಯಾಪಾರ ವಹಿವಾಟು ಹೆಚ್ಚಾಗುವ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲದಿದ್ದರೆ ವರ್ತಕರಿಗೆ ಸಮಸ್ಯೆಯಾಗಲಿದೆ ಎಂಬುವುದನ್ನು ಮತ್ತೊಮ್ಮೆ ಶಾಸಕರ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ.
ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ರಸ್ತೆಗಳು ರಸ್ತೆಗಳು ಕಿರಿದಾಗಿರುವುದು ನಿಜ. ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ನಮ್ಮ ಅಡ್ಡಿ ಇಲ್ಲ. ರಸ್ತೆ ಅಗಲೀಕರಣ ಮಾಡುವಾಗ ಕಟ್ಟಡದ ಮಾಲೀಕರನ್ನು ಗಣನೆಗೆ ತೆಗೆದುಕೊಂಡು ಪರಿಹಾರ ನೀಡಿ ರಸ್ತೆ ಅಗಲೀಕರಣ ಮಾಡುವುದರಲ್ಲಿ ನಮ್ಮ ಅಭ್ಯಂತರ ಇಲ್ಲ. ಪಾರ್ಕಿಂಗ್ ಸಮಸ್ಯೆ ಇದ್ದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಅಂದರೆ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಅಥವಾ ಜಾಗದ ಮಾಲೀಕರು ಖಾಲಿ ಜಾಗಗಳಲ್ಲಿ ಪೆ ಅಂಡ್ ಪಾರ್ಕ್ ವ್ಯವಸ್ಥೆ ಮಾಡಬೇಕು ಮುಖ್ಯರಸ್ತೆ ಬಿಟ್ಟು ಹಣ ನೀಡಿ ಪಾರ್ಕಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದರು.
ಅದೇ ರೀತಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಏನೇ ತೀರ್ಮಾನ ತೆಗೆದುಕೊಂಡರು ವರ್ತಕರನ್ನು ಗಣನೆಗೆ ತೆಗೆದುಕೊಂಡು ತೀರ್ಮಾನಿಸಲಾಗುವುದು ಎಂದು ಈಗಾಗಲೇ ವರ್ತಕರಿಗೆ ಭರವಸೆ ನೀಡಿದ್ದಾರೆ. ಆದರೂ ಸರ್ವ ವರ್ತಕರು ಒಗ್ಗೂಡಿ ಶಾಸಕರನ್ನು ಮತ್ತೊಮ್ಮೆ ಭೇಟಿ ಮಾಡಿ ಶಾಸಕರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದರು.
ವರ್ತಕರ ಸಂಘದ ನಿರ್ದೇಶಕ ಸಕ್ಸೆಸ್ ಮೆನ್ಸ್ ಹಬ್‌ನ ಮಾಲೀಕ ಆರ್ ಸುರೇಶ್ ಮಾತನಾಡಿ ಜನವರಿಯಿಂದ ಮೇ ವರೆಗೆ ವ್ಯಾಪಾರದ ಸೀಸನ್ ಆಗಿರುವುದರಿಂದ ಈ ಸಂದರ್ಭದಲ್ಲಿ ಪಾರ್ಕಿಂಗ್ ನಿರಾಕರಿಸಿ ದ್ವಿಮುಖ ಸಂಚಾರ ಮಾಡಿದರೆ ವ್ಯಾಪಾರಸ್ಥರು ತೀವ್ರ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ವಿರಾಜಪೇಟೆಯಲ್ಲಿ ನಡೆಯುವಂತಹ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ನಮ್ಮ ಅಭ್ಯಂತರವಿಲ್ಲ, ಅಂಗಡಿ ಮಾಲೀಕರಿಗೂ ತೊಂದರೆಯಾಗದಂತೆ ಕೆಲಸ ಮಾಡಬೇಕು.
ಅಧಿಕಾರಿಗಳು, ಸಂಬಂಧಪಟ್ಟವರು ಮರು ಪರಿಶೀಲನೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ವಿರಾಜಪೇಟೆಯ ಹ್ಯಾಪಿ ಶಾಪಿಂಗ್ ಹಬ್, ಅಭಿಲಾಷ್ ಸ್ಟೋರ್, ಲೋರ ಲೇಡೀಸ್ ಶಾಪ್, ಚಿಲ್ದನ್ಸ್ ಪಾರ್ಕ್, ಫ್ಯಾಮಿಲಿ ಫ್ಯಾಷನ್, ಕೂರ್ಗ್ ಟ್ರೇಡಿಷನಲ್ ಶಾಪ್, ಅಭಿಷೇಕ್ ಸೆಲೆಕ್ಷನ್, ವಿಶಾಲ್ ಗಾರ್ಮೆಂಟ್ಸ್, ವಿಷ್ಣು ಗಾರ್ಮೆಂಟ್ಸ್, ಕಾವೇರಿ ಫರ್ನಿಚರ್, ಮೂನ್ ವಾಕ್ ಶಾಪ್, ಫೇಬ್ರಿಕ್ ಹೌಸ್ ಶಾಪ್, ಇನ್ನಿತರ ಸುಮಾರು 80ಕ್ಕೂ ಹೆಚ್ಚು ಅಂಗಡಿ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.