ಪತಿ ‘ಸೈಕೋ’ ಎಂದು ಆರೋಪಿಸಿದ್ದ ಪ್ರಕರಣಕ್ಕೆ ತಿರುವು; ಮಹಿಳೆಗೆ ಮೂರು ಮದುವೆಗಳಾಗಿದೆ ಎಂದ ಪತಿ!

ಪತಿ ‘ಸೈಕೋ’ ಎಂದು ಆರೋಪಿಸಿದ್ದ ಪ್ರಕರಣಕ್ಕೆ ತಿರುವು; ಮಹಿಳೆಗೆ ಮೂರು ಮದುವೆಗಳಾಗಿದೆ ಎಂದ ಪತಿ!
Photo credit: TV09

ಬೆಂಗಳೂರು, ಜ. 11: ಪತಿ ಸೈಕೋನಂತೆ ವರ್ತಿಸುತ್ತಾನೆ ಎಂದು ಪತ್ನಿ ಆರೋಪಿಸಿದ್ದ ಕೌಟುಂಬಿಕ ಕಲಹ ಪ್ರಕರಣಕ್ಕೆ ಭರ್ಜರಿ ತಿರುವು ಸಿಕ್ಕಿದೆ. ತನ್ನ ವಿರುದ್ಧ ದೂರು ನೀಡಿರುವ ಪತ್ನಿ ಮೇಘಶ್ರೀಗೆ ಈಗಾಗಲೇ ಮೂರು ಮದುವೆಗಳಾಗಿದ್ದು, ಹಣ ಮತ್ತು ಚಿನ್ನಾಭರಣಕ್ಕಾಗಿ ಮದುವೆ ನಾಟಕವಾಡುತ್ತಿದ್ದಾಳೆ ಎಂದು ಪತಿ ಮಂಜುನಾಥ್‌ ಪ್ರತ್ಯಾರೋಪ ಮಾಡಿದ್ದಾರೆ.

ಮೇಘಶ್ರೀ ಸಲ್ಲಿಸಿದ್ದ ದೂರಿನಲ್ಲಿ, ಪತಿ ಫೋನ್‌ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದಾನೆ. ಮನೆಯವರ ಮುಂದೆಯೇ ಹಾಗೂ ಪಕ್ಕದವರಿಗೆ ಮುಜುಗರ ಉಂಟಾಗುವಂತೆ ಬೆತ್ತಲೆಯಾಗಿ ಓಡಾಡುತ್ತಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಂಜುನಾಥ್‌, ಮೇಘಶ್ರೀ ನಾಲ್ಕನೇ ಗಂಡನ ಹುಡುಕಾಟದಲ್ಲಿದ್ದು, ಹಿಂದಿನ ಗಂಡಂದಿರ ಹಣವನ್ನು ವೈಭವಕ್ಕೆ ಬಳಸಿಕೊಂಡಿದ್ದಾಳೆ ಎಂದು ದೂರಿದ್ದಾರೆ.

ಮಂಜುನಾಥ್‌ ಹೇಳಿಕೆಯಂತೆ, ಮೇಘಶ್ರೀ ತನ್ನಿಂದ 30 ಲಕ್ಷ ರೂ. ನಗದು, 50 ಗ್ರಾಂ ಚಿನ್ನಾಭರಣ, ಐಫೋನ್‌, ಐಪ್ಯಾಡ್‌ ಹಾಗೂ ಟ್ಯಾಬ್‌ಗಳನ್ನು ಪಡೆದಿದ್ದಾಳೆ. ಎರಡನೇ ಗಂಡನೊಂದಿಗೆ ಪ್ರವಾಸಗಳಿಗೆ ತೆರಳಿ, ಅವರ ಹಣ ಹಾಗೂ ಚಿನ್ನಾಭರಣ ಬಳಸಿಕೊಂಡಿದ್ದಾಳೆ. ಬಳಿಕ ತನ್ನನ್ನು ಮೂರನೇ ವ್ಯಕ್ತಿಯಾಗಿ ಬಲೆಗೆ ಬೀಳಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಮೊದಲ ಹಾಗೂ ಎರಡನೇ ಗಂಡರ ವಿರುದ್ಧವೂ ಮೇಘಶ್ರೀ ಈಗಾಗಲೇ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ ಎಂದು ಮಂಜುನಾಥ್‌ ತಿಳಿಸಿದ್ದಾರೆ. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಕಾನೂನು ಹೋರಾಟಕ್ಕೆ ಮುಂದಾಗಿರುವ ಅವರು, ಕೇವಲ ದೇವಾಲಯದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಹೇಳಿ ಸುಳ್ಳು ಆರೋಪ ಮಾಡಲಾಗಿದೆ ಎಂದಿದ್ದಾರೆ. ತಾನು 12 ಲಕ್ಷ ರೂ. ನೀಡಿ ಮನೆ ಲೀಸ್‌ಗೆ ತೆಗೆದುಕೊಟ್ಟಿದ್ದು, ಆಕೆಯ ನಿಜ ಮುಖವಾಡವನ್ನು ಪೊಲೀಸರ ಮುಂದೆ ಬಯಲು ಮಾಡುವುದಾಗಿ ತಿಳಿಸಿದ್ದಾರೆ.

ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ ಮೇಘಶ್ರೀ ನೀಡಿಲ್ಲ. ಮನೆಯಲ್ಲಿರುವಾಗ ಕದ್ದು ಫೋಟೋಗಳನ್ನು ತೆಗೆದಿದ್ದಾಳೆ. ಉದ್ಯೋಗಕ್ಕೆ ಸೇರಿರುವುದಕ್ಕೂ ನಕಲಿ ದಾಖಲೆಗಳನ್ನು ಬಳಕೆ ಮಾಡಿದ್ದಾಳೆ. ಅಲ್ಲದೆ, ರೌಡಿಶೀಟರ್‌ ಒಬ್ಬರಿಂದ ಬೆದರಿಕೆ ಹಾಕಿಸಿರುವುದಾಗಿ ಆರೋಪಿಸಿ ಮಂಜುನಾಥ್‌ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.