ಶವ ಸಾಗಣೆಗೆ ವಾಹನ ನಿರಾಕರಣೆ: 4 ವರ್ಷದ ಮಗುವಿನ ಮೃತದೇಹವನ್ನು ಚೀಲದಲ್ಲಿ ಕೊಂಡೊಯ್ದ ಕುಟುಂಬ

Dec 20, 2025 - 22:54
Dec 21, 2025 - 11:11
 0  1.6k
ಶವ ಸಾಗಣೆಗೆ ವಾಹನ ನಿರಾಕರಣೆ: 4 ವರ್ಷದ ಮಗುವಿನ ಮೃತದೇಹವನ್ನು ಚೀಲದಲ್ಲಿ ಕೊಂಡೊಯ್ದ ಕುಟುಂಬ

ರಾಂಚಿ (ಜಾರ್ಖಂಡ್): ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯ ಮತ್ತು ಸೇವಾ ವ್ಯವಸ್ಥೆಯ ದೌರ್ಬಲ್ಯವನ್ನು ಬಯಲಿಗೆಳೆದಿರುವ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ ಮೃತಪಟ್ಟ ನಾಲ್ಕು ವರ್ಷದ ಬುಡಕಟ್ಟು ಮಗುವಿನ ಮೃತದೇಹವನ್ನು ಊರಿಗೆ ಸಾಗಿಸಲು ಶವ ಸಾಗಣೆ ವಾಹನ ಒದಗಿಸದ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಮಗುವಿನ ಶವವನ್ನು ಚೀಲದಲ್ಲಿ ಇಟ್ಟುಕೊಂಡು ಸಾರ್ವಜನಿಕ ಬಸ್‌ನಲ್ಲಿ ತೆರಳಿದ್ದಾರೆ.

ನೊಮುಂಡಿ ಬ್ಲಾಕ್‌ನ ಬಲ್ಜೋಡಿ ಗ್ರಾಮದ ನಿವಾಸಿ ದಿಂಬಾ ಚಟೋಂಬಾ ಅವರ ನಾಲ್ಕು ವರ್ಷದ ಮಗು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಚೈಬಾಸಾ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಯ ನಡುವೆಯೇ ಮಗು ಮೃತಪಟ್ಟಿದೆ. ಮರಣದ ನಂತರ ಶವವನ್ನು ಊರಿಗೆ ಕರೆದೊಯ್ಯಲು ಶವ ಸಾಗಣೆ ವಾಹನ ನೀಡುವಂತೆ ಕುಟುಂಬವು ಆಸ್ಪತ್ರೆ ಆಡಳಿತಕ್ಕೆ ಮನವಿ ಮಾಡಿಕೊಂಡಿದೆ. ಆದರೆ, ಹಲವು ಗಂಟೆಗಳ ಕಾಲ ಕಾದರೂ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ ಎಂದು ಕುಟುಂಬ ಆರೋಪಿಸಿದೆ.

ಖಾಸಗಿ ವಾಹನ ಬಾಡಿಗೆಗೆ ಪಡೆಯುವಷ್ಟು ಆರ್ಥಿಕ ಸಾಮರ್ಥ್ಯ ಇಲ್ಲದ ಕಾರಣ, ಕುಟುಂಬಸ್ಥರು ಮಗುವಿನ ಮೃತದೇಹವನ್ನು ಚೀಲದಲ್ಲಿ ಇಟ್ಟುಕೊಂಡು ಬಸ್‌ನಲ್ಲಿ ತಮ್ಮೂರಿಗೆ ತೆರಳಿದ್ದಾರೆ. ಈ ಘಟನೆ ಸ್ಥಳದಲ್ಲಿದ್ದವರನ್ನು ಕಣ್ಣೀರಿಡುವಂತೆ ಮಾಡಿದ್ದು, ಉಚಿತ ಶವ ಸಾಗಣೆ ಸೇವೆ ಸೇರಿದಂತೆ ಸರ್ಕಾರಿ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ಮತ್ತೆ ಪ್ರಶ್ನಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಚೈಬಾಸಾ ಸದರ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಭಾರತಿ ಮಿಂಜ್, “ಶವ ಸಾಗಣೆಗೆ ಆಂಬ್ಯುಲೆನ್ಸ್ ಸೇವೆ ಇರುವುದಿಲ್ಲ. ಲಭ್ಯವಿರುವ ಶವ ಸಾಗಣೆ ವಾಹನಕ್ಕಾಗಿ ಎರಡು–ಮೂರು ಗಂಟೆ ಕಾಯುವಂತೆ ಕುಟುಂಬಕ್ಕೆ ತಿಳಿಸಿದ್ದೆವು. ಆದರೆ ಅವರು ಕಾಯಲು ನಿರಾಕರಿಸಿ ಶವವನ್ನು ಚೀಲದಲ್ಲಿ ಇಟ್ಟುಕೊಂಡು ತೆರಳಿದ್ದಾರೆ” ಎಂದು ತಿಳಿಸಿದ್ದಾರೆ.

ಇತ್ತ, ರಾಜ್ಯ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಮಾತನಾಡಿ, “ಶವ ಸಾಗಣೆ ವಾಹನ ಒದಗಿಸುವ ವ್ಯವಸ್ಥೆ ಇದೆ. ಬುಡಕಟ್ಟು ಕುಟುಂಬದೊಂದಿಗೆ ಈ ರೀತಿಯ ಘಟನೆ ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 6
Wow Wow 0