ವಿರಾಜಪೇಟೆ:ಕೊಲೆ ಆರೋಪಿ ದೋಷಮುಕ್ತ

Jan 3, 2026 - 23:04
 0  1.8k
ವಿರಾಜಪೇಟೆ:ಕೊಲೆ ಆರೋಪಿ ದೋಷಮುಕ್ತ

ವಿರಾಜಪೇಟೆ: ಕೊಲೆ ಆರೋಪವನ್ನು ಎದುರಿಸುತ್ತಿದ್ದ ಅಸ್ಸಾಂ ಮೂಲದ ಉಸ್ಮಾನ್ ಅಲಿ ಅವರನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ದೋಷಮುಕ್ತ ಎಂದು ತೀರ್ಪು ನೀಡಿದೆ.

ವಿರಾಜಪೇಟೆ ತಾಲೂಕು ಹೆಗ್ಗಳ ಗ್ರಾಮದ ಎಸ್ ಅಂಡ್ ಎಸ್ ಎಸ್ಟೇಟಿನ ಲೈನ್ ಮನೆಯಲ್ಲಿ ವಾಸವಿದ್ದ ಉಸ್ಮಾನ್ ಅಲಿ, 2019ರ ಜ.3 ರಂದು ತನ್ನ ಎರಡನೇ ಪತ್ನಿ ಮರ್ಜಿನಾ ಕತೂನ್ ಎಂಬುವವರನ್ನು ಕೊಲೆ ಮಾಡಿ ಕುರುಚಲು ಗಿಡಗಂಟಿಗಳ ಮಧ್ಯೆ ಎಸೆದು ಹೋಗಿದ್ದ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

ಈತನ ಎರಡನೇ ಪತ್ನಿ ಮರ್ಜಿನಾ ಕತೂನ್, ಮೊದಲ ಪತ್ನಿ ಮಮ್ರಾಜ್ ಬೇಗ್ ಬಿಟ್ಟುಬಿಡುವಂತೆ ಆಗಿಂದಾಗ್ಗೆ ಉಸ್ಮಾನ್ ಅಲಿಯನ್ನು ಪೀಡಿಸುತ್ತಿದ್ದಳು. ಇದರಿಂದ ದಿನನಿತ್ಯ ಜಗಳ ಉಂಟಾಗುತ್ತಿತ್ತು.

ಇದರಿಂದ ಬೇಸತ್ತ ಪತಿ ಉಸ್ಮಾನ್ ಎರಡನೇ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ 2019ರ ಜ. 2ರಂದು ಅವಳೊಂದಿಗೆ ಅರಮೇರಿ ಗ್ರಾಮಕ್ಕೆ ತೆರಳಿ ಪತ್ನಿಯನ್ನು ಉಪಾಯದಿಂದ ಸ್ಥಳೀಯರಾದ ಪಿ. ಬೋಪಣ್ಣ ಅವರ ಹಡಿಲು ಬಿಟ್ಟ ಗದ್ದೆಯ ಬಳಿ ಕರೆದುಕೊಂಡು ಹೋಗಿ ರಾತ್ರಿ ಅಲ್ಲಿಯೇ ಇದ್ದು ಜ.3ರಂದು ಸಂಜೆ ವೇಳೆ ಮರ್ಜಿನಾ ಅವರು ಧರಿಸಿದ್ದ ವೇಲನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಮೃತದೇಹವನ್ನು ಗಿಡಗಂಟಿಗಳ ಎಸೆದು ಹೋಗಿದ್ದನು ಎಂದು ಆರೋಪ ದಡಿ ಪ್ರಕರಣ ದಾಖಲಿಸಲಾಗಿತ್ತು. ಕೊಲೆ ಆರೋಪಿ ಹಾಗೂ ಆತನ ಪತ್ನಿಯರು ಅಸ್ಸಾಂ ರಾಜ್ಯಕ್ಕೆ ಸೇರಿದವರಾಗಿದ್ದು, ಇಲ್ಲಿಯೇ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರು.

ಪ್ರಕರಣದ ವಿಚಾರಣೆ ವಿರಾಜಪೇಟೆಯ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾ ಲಯದಲ್ಲಿ ನಡೆದು ಪೋಲಿಸರು ಸುಮಾರು 30ಕ್ಕೂ ಅಧಿಕ ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದರು.

ಅಂತಿಮವಾಗಿ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಎಸ್‌.ನಟರಾಜ್ ಅವರು, ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿ, ಆರೋಪ ಸಾಬೀತುಪಡಿಸಿಲ್ಲವೆಂದು ಆರೋಪಿ ಉಸ್ಮಾನ್ ಅಲಿ ಅವರನ್ನು ಕೊಲೆ ಆರೋಪದಿಂದ ದೋಷಮುಕ್ತ ಮಾಡಿ ತೀರ್ಪು ನೀಡಿದ್ದಾರೆ.ಆರೋಪಿಯ ಪರ ವಕೀಲರಾದ ಡಿ.ಸಿ. ಧ್ರುವ ವಾದಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 1
Wow Wow 1