ವಿರಾಜಪೇಟೆ :ಪುರಸಭೆ ಆಯ-ವ್ಯಯದ ಬಗ್ಗೆ ಪೂರ್ವಭಾವಿ ಸಭೆ
ವಿರಾಜಪೇಟೆ: ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನ [ಪಾರ್ಕ್] ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಾಗು ಬೀದಿ ದೀಪ ಅಳವಡಿಕೆ ಮತ್ತು ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಬೇಕಾದ ಅನುದಾನವನ್ನು ಮೀಸಲಿಡುವಂತೆ ಜಿಲ್ಲಾ ಉಪವಿಭಾಗಧಿಕಾರಿ ಪುರಸಭೆಯ ಆಡಳಿತಾಧಿಕಾರಿ ನಿತಿನ್ ಚಕ್ಕಿ ಹೇಳಿದರು.
ವಿರಾಜಪೇಟೆ ಪುರಸಭೆ ವತಿಯಿಂದ ಸ್ಥಳಿಯ ಪುರಭವನದಲ್ಲಿ ಆಯೋಜಿಸಲಾಗಿದ್ದ ಆಯ-ವ್ಯಯದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈಗಾಗಲೇ ಪುರಸಭೆ ವ್ಯಾಪ್ತಿಯನ್ನು ವಿಸ್ತರಿಸಿ ವಾರ್ಡ್ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲಾ ವಾರ್ಡ್‍ಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜನರ ಕುಂದು ಕೊರತೆಗಳನ್ನು ನೀಗಿಸುವ ಕೆಲಸ ಆಗಬೇಕು. ಹಾಗೂ ವಾಹನ ದಟ್ಟಣೆ ಇರುವುದರಿಂದ ರಸ್ತೆ ಅಭಿವೃದ್ಧಿ, ಚರಂಡಿ ಹಾಗೂ ಸ್ವಚ್ಚತೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಮುಖ್ಯಧಿಕಾರಿ ಪಿ.ಕೆ. ನಾಚಪ್ಪ ಅವರು ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪವಾದಾಗ ಮಾತನಾಡಿ ಇದುವರೆಗೂ ನೀರಿನ ಸಮಸ್ಯೆಯಾಗಿಲ್ಲ. ನಗರ ನೀರು ಸರಬರಾಜು ಯೋಜನೆಯಿಂದ ಪೈಪ್ ಅಳವಡಿಕೆ ಕಾಮಗಾರಿ ನಡೆಸುತ್ತಿರುವುದರಿಂದ ನೀರು ಸರಬರಾಜು ವ್ಯತ್ಯಾಸವಾಗಿದ್ದು ಸಮಸ್ಯೆ ಬಗೆಹರಿಸಲಾಗಿದೆ ಎಂದ ಅವರು ಇನ್ನು ಪ.ಜಾತಿ. ಪಂಗಡಗಳಿಗೆ ಸೌಲಭ್ಯಗಳನ್ನು ಮೀಸಲಿಡಲಾಗಿದೆ. ಈ ವರ್ಷ ಮಳೆಗಾಲಕ್ಕೂ ಮುಂಚೆ ತೋಡು, ಕಾಲುವೆಗಳನ್ನು ಸ್ವಚ್ಚಗೊಳಿಸುವ ಮೂಲಕ ಸ್ವಚ್ಚತೆಗೆ ಆಧ್ಯತೆ ನೀಡಲಾಗುವುದು ಎಂದರು.
ಖಾಸಗಿ ಬಸ್ಸು ಕಾರ್ಮಿಕ ಸಂಘದ ಜೂಡಿವಾಜ್ ಅವರು ಮಾತನಾಡಿ ಬಸ್ ನಿಲ್ದಾಣದ ಒಳಗೆ ಅಂದಾಜು ನೂರು ಕಾರು, ಬೈಕ್ ಇತರೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ ಇದರಿಂದ ಖಾಸಗಿ ಬಸ್‍ಗಳನ್ನು ತಿರುಗಿಸಲು ನಿಲ್ಲಿಸಲು ಸಮಸ್ಯೆ ಉಂಟಾಗಿದ್ದು ಕೂಡಲೇ ಇತರೆ ವಾಹನಗಳನ್ನು ಬಸ್ ನಿಲ್ದಾಣದ ಒಳಗ್ಗೆ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು ಎಂದಾಗ ಸಂಘದ ಕೆ.ಯು.ಗಣೇಶ್ ತಮ್ಮಯ್ಯ ದ್ವನಿನಿಗೂಡಿಸಿದರು. ಪಟ್ಟಣ ವ್ಯಾಪ್ತಿಯ ನೆಹರು ನಗರದ ಸಮುದಾಯ ಭವನ ಮತಗಟ್ಟೆ ಕೇಂದ್ರ ಆದರು ರಸ್ತೆಯಿಂದ ಸಮುದಾಯ ಭವನಕ್ಕೆ ಸಿಮೆಂಟ್ ಮೆಟ್ಟಿಲು ಮಾಡಿಕೊಡುವಂತೆ ಒತ್ತಾಯಿಸಿದರು.
ಹಿರಿಯ ನಾಗರಿಕರ ವೇದಿಕೆಯ ಶಂಕರಿ ಪೊನ್ನಪ್ಪ ಅವರು ಮಾತನಾಡಿ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು 400 ಹಾಸಿಗೆ ಇರುವಂತೆ ಮೇಲ್ಧರ್ಜೆಗೆರಿಸುವ ಕಾರ್ಯ ನಡೆದಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರುಗಳಿಲ್ಲ ವೈದ್ಯರ ಕೊರತೆ ಇರುವುದರಿಂದ ಹೊರ ರೋಗಿಗಳು ದಿನನಿತ್ಯ ಸಾಲುಗಟ್ಟಿ ನಿಲ್ಲುತ್ತಾರೆ ಇದರ ಬಗ್ಗೆ ಸರಕಾರ ಇತ್ತ ಗಮನ ಹರಿಸಿ ತಾಲೂಕು ಕೇಂದ್ರವಾದ ಈ ಆಸ್ಪತ್ರೆಗೆ ಉತ್ತಮ ವೈದ್ಯರನ್ನು ನೇಮಿಸುವಂತಾಗಬೇಕು ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಬಡ ಕುಟುಂಬದ ಪ.ಜಾತಿ, ಪಂಗಡದವರು ಎಲ್ಲಿ ಇದ್ದಾರೆ ಎಂಬುದನ್ನು ನೋಡಿ ಸರಕಾರದಿಂದ ಅವರಿಗೆ ಸಿಗುವಂತ ಸೌಲಭ್ಯಗಳನ್ನು ತಪ್ಪದೆ ತಲುಪಿಸುವಂತ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.
ಎ.ಆರ್. ರವಿ ಕುಮಾರ್ ಮಾತನಾಡಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಸಿ.ಸಿ.ಕ್ಯಾಮರ ಅಳವಡಿಸಲಾಗಿದ್ದರೂ ಕ್ಯಾಮರಗಳು ಕೆಲಸ ಮಾಡುತ್ತಿಲ್ಲ ಎಲ್ಲ ಕ್ಯಾಮರಗಳು ದುಸ್ಥಿತಿಯಲ್ಲಿವೆ ಪಟ್ಟಣದಲ್ಲಿ ಏನು ನಡೆದರು ತಿಳಿದುಕೊಳ್ಳುವುದು ಹೇಗೆ ಅದರಿಂದ ಕೂಡಲೆ ದುಸ್ಥಿತಿಯಲ್ಲಿರುವ ಸಿ.ಸಿ.ಕ್ಯಾಮರವನ್ನು ರಿಪೇರಿ ಮಾಡಿ ಇಲ್ಲಾ ಹೊಸ ಸಿ.ಸಿ ಕ್ಯಾಮರವನ್ನು ಅಳವಡಿಸುವಂತೆ ಒತ್ತಾಯಿಸಿದರು.
ನಿವೃತ್ತ ಶಿಕ್ಷಕ ಎ.ವಿ.ಮಂಜುನಾಥ್ ಮಾತನಾಡಿ ಪಟ್ಟಣಕ್ಕೆ ಶೋಭೆ ತರುವಂತ ಇರುವ ಗಡಿಯಾರ ಕಂಬದಲ್ಲಿ ಗಡಿಯಾರವೆ ಚಾಲನೆಯಲ್ಲಿಲ್ಲ. ಎಷ್ಟೋ ಸಮಯದಿಂದ ಗಡಿಯಾರ ನಿಂತು ಹೋಗಿದೆ ಕ್ಷೇತ್ರದ ಶಾಸಕರು ಸಾಕಷ್ಟು ಅನುದಾನವನ್ನು ಪುರಸಭೆಗೆ ನೀಡಲಾಗಿದ್ದರು ಕಾಮಗಾರಿ ನಡೆಯುತ್ತಿಲ್ಲ ಎಂದು ದೂರಿದರಲ್ಲದೆ, ಪುರಸಭೆ ವ್ಯಾಪ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣ ಮಾಡಲು ಜಾಗ ನೀಡುವಂತೆ ಹೇಳಿದರು.
ಆಟೋ ಚಾಲಕರ ಸಂಘದ ಎಂ.ಎಂ. ಶಶಿಧರನ್, ಶಿವಕೇರಿಯ ಸೀತಮ್ಮ ಮತ್ತಿತರರು ತಮ್ಮ ಸಮಸ್ಯೆಗಳನ್ನು ಬಗೆ ಹರಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದಾಗ ಆಗುವ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.
ಪಟ್ಟಣದಲ್ಲಿ ಕಿರಿದಾರ ರಸ್ತೆಯಲ್ಲಿ ದಿನದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ, ಪಾದಚಾರಿಗಳು ಮತ್ತು ಸಾರ್ವಜನಿಕರು ಓಡಾಡಲು ಸಮಸ್ಯೆಯಾಗಿದ್ದು ಸುಂಕದಕಟ್ಟೆಯಿಂದ ಮೀನುಪೇಟೆವರೆಗೂ ಮುಖ್ಯ ರಸ್ತೆಯ ಅಗಲಿಕರಣ ಮಾಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಕೇಳಿಬಂತು. ಸಭೆಯಲ್ಲಿ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.