ವಿರಾಜಪೇಟೆ: ಶ್ರೀಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವ ಅಂಗವಾಗಿ ಮೆರವಣಿಗೆ

Mar 21, 2026 - 11:07
 0  175
ವಿರಾಜಪೇಟೆ: ಶ್ರೀಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವ ಅಂಗವಾಗಿ ಮೆರವಣಿಗೆ

ವಿರಾಜಪೇಟೆ:ನಗರಕ್ಕೆ ಕಳಶ ಪ್ರಾಯದಂತಿರುವ ಮಲೆಯಲ್ಲಿ ಸ್ಥಿತಗೊಂಡ ಶ್ರೀಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವ ಅಂಗವಾಗಿ ಪೇಟೆ ಮೆರವಣಿಗೆ ನಡೆಯಿತು.

 ವಿರಾಜಪೇಟೆ ನಗರಕ್ಕೆ ಮುಕುಟದಂತಿರುವ ಮಲೆತಿರಿಕೆ ಬೆಟ್ಟ ಎಂದು ಪ್ರಖ್ಯಾತಿ ಪಡೆದಿರುವ ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು, ಕುಕ್ಲೂರು ಭಾಗಗಳಿಗೆ ಸೇರಿದ ಶ್ರೀ ಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವಕ್ಕೆ ಮಾ.೧೫ರಂದು ಭಾನುವಾರ ಕುಂದಿರ ಮನೆಯಿಂದ ಭಂಡಾರ ಬಂದು ದೇಗುಲದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಿತು.

ಸೋಮವಾರ ನಾಗದೇವರ ವಿಶೇಷ ಪೂಜೆ ನಡೆಯಿತು. ಮಂಗಳವಾರ ದಿನದಂದು ಶ್ರೀ ಅಯ್ಯಪ್ಪ ದೇವರ ವಿಶೇಷ ಪೂಜೆ, ರಾತ್ರಿ ಇರ್‌ಬೊಳಕ್ ಮಹಾಪೂಜೆ ನಡೆಯಿತು. ಬುಧವಾರ ಮಧ್ಯಾಹ್ನ ನೆರಪು, ಎತ್ತ್ ಪೋರಾಟ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು ನಂತರದಲ್ಲಿ ಶ್ರೀ ದೇವರಿಗೆ ಮಹಾ ಪೂಜೆ ಸಲ್ಲಿಕೆಯಾಯಿತು.

ಸಂಜೆ ಶ್ರೀ ಮಲೆ ಮಹಾದೇಶ್ವರ ದೇವರ ಉತ್ಸವ ಮೂರ್ತಿ(ತಡಂಬು) ನಗರ ಪ್ರದಕ್ಷಿಣೆ ಮಾಡಿತು. ನಗರದ ತೆಲುಗರ ಬೀದಿ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ (ಗೌರಿ ದೇವಸ್ಥಾನ)ದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಸವೇಶ್ವರ ದೇಗುಲದ ಆಡಳಿತ ಮಂಡಳಿಯ ವತಿಯಿಂದ ಲಘು ಉಪಹಾರ ಕಾರ್ಯಕ್ರಮ ನಡೆಯಿತು. ದೇವರ ಉತ್ಸವಮೂರ್ತಿಯ ಮೆರವಣಿಗೆ ಮುಖ್ಯ ಬೀದಿಗಾಗಿ ಸಂಚರಿಸಿ ಬಳಿಕ ರಾಂಲಾಲ್ (ಸತ್ಯ ನಾರಾಯಣ ಕಾಂಪ್ಲೆಕ್ಸ್) ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

 ದೇವಾಂಗ ಬೀದಿಯ (ವರ್ಷದಲ್ಲಿ ಒಂದು ದಿನ ಮಾತ್ರ ದರ್ಶನ ಭಾಗ್ಯ ಕರುಣಿಸುವ) ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಖ್ಯ ಬೀದಿಗಾಗಿ ಮಲೆ ಮಹಾದೇಶ್ವರ ದೇಗುಲಕ್ಕೆ ಹಿಂದಿರುಗಿತು. ಶ್ರೀ ದೇವರ ಪೇಟೆ ಆಗಮನ ಅಂಗವಾಗಿ ಮುಖ್ಯ ಬೀದಿಗಳು ಸೇರಿದಂತೆ ಬಸವೇಶ್ವರ ದೇಗುಲ, ಮಹಾಲಕ್ಷ್ಮಿ ದೇಗುಲ, ಪಟ್ಟಣದ ಎಲ್ಲಾ ದೇಗುಲಗಳು ವಿದ್ಯುತ್ ಅಲಂಕೃತವಾಗಿ ಕಂಗೊಳಿಸಿತು.

 ಕೇರಳ ಚೆಂಡೆವಾದ್ಯ ಮತ್ತು ಕೊಡಗಿನ ಸಾಂಪ್ರದಾಯಿಕ ಓಲಗ ದೇವರ ಮೆರವಣಿಗೆಗೆ ಮೆರುಗು ನೀಡಿದವು. ಶ್ರೀ ದೇವರ ಪೇಟೆ ಮೆರವಣಿಗೆ ತೆಲುಗರ ಬೀದಿ, ಜೈನರ ಬೀದಿ, ಎಫ್.ಎಂ.ಸಿ. ರಸ್ತೆ, ಮುಖ್ಯ ಬೀದಿ, ದೇವಾಂಗ ಬೀದಿ, ಶ್ರೀ ಮಹಾಗಣಪತಿ ದೇಗುಲದ ಸನೀಹದ ರಾಂ ಲಾಲ್ ಅವರ ಸ್ಥಳದಲ್ಲಿ ಭಕ್ತರಿಂದ ಶ್ರೀ ದೇವರಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸಿ ಶ್ರೀ ದೇವರ ಅನುಗ್ರಹ ಪಡೆದರು.

 ಈ ಸಂದರ್ಭ ದೇಗುಲದ ತಕ್ಕ ಮುಖ್ಯಸ್ಥರಾದ ಕೊಳುವಂಡ ರಾಜರಾಮ್, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವಾಟೀರಿರ ಶಂಕರಿ ಪೊನ್ನಪ್ಪ, ದೇವಾಲಯ ಸಮಿತಿ ಕಾನೂನು ಸಲಹೆಗಾರರಾದ ಬೊಳ್ಳಚಂಡ ಸೋಮಣ್ಣ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಶ್ರೀ ಬಸವೇಶ್ವರ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರನಾಥ್ ಕಾಮತ್, ಪದಾಧಿಕಾರಿಗಳಾದ ಪುಷ್ಪರಾಜ್, ಪ್ರಸಾದ್, ಸಂಪತ್, ಟಿ.ಪಿ.ಕೃಷ್ಣ, ಲೋಕನಾಥ್, ನರೇಂದ್ರ ಕಾಮತ್, ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು ಗ್ರಾಮಗಳ ಗ್ರಾಮಸ್ಥರು, ಪ್ರಮುಖರು, ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ಉತ್ಸವದಲ್ಲಿ ಭಾಗಿಗಳಾದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0