National News

ಪಶ್ಚಿಮ ಬಂಗಾಳ | ನೀರು ಎಂದುಕೊಂಡು ಆ್ಯಸಿಡ್ ಹಾಕಿ ಅಡುಗೆ; 6 ಜನರ ಸ್ಥಿತಿ ಗಂಭೀರ

admincoorgdaily

ಕೋಲ್ಕತ್ತ: ಪಶ್ಚಿಮ ಬಂಗಾಳದ ಘಾಟಲ್‌ ತಾಲ್ಲೂಕಿನ ಮನೋಹರ್‌ಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ರತ್ನೇಶ್ವರಬತಿ ಪ್ರದೇಶದಲ್ಲಿ ನೀರಿನ ಬದಲು ಆ್ಯಸಿಡ್ ಬಳಸಿ ಅಡುಗೆ ಮಾಡಿದ ಘಟನೆ ನಡೆದಿದೆ. ಅದನ್ನು ಸೇವಿಸಿದ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಂಧು ಎಂಬವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆ, ಬೆಳ್ಳಿ ಆಭರಣ ತಯಾರಿಕೆಗೆ ಬಳಸುವ ಆ್ಯಸಿಡ್ ಅನ್ನು ನೀರು ಎಂದು ತಪ್ಪಾಗಿ ಭಾವಿಸಿ ಅಡುಗೆಯಲ್ಲಿ ಬಳಸಿದ್ದಾಳೆ. ಆ್ಯಸಿಡ್ ಸಾಮಾನ್ಯವಾಗಿ ನೀರು ಇಡುವ ಪಾತ್ರೆಯಲ್ಲೇ ಇರಿಸಿದ್ದರಿಂದ ಈ ಗೊಂದಲ ಸಂಭವಿಸಿದೆ. ಆ ವಿಷಯ ತಿಳಿಯದ ಮಹಿಳೆ ಆ್ಯಸಿಡ್ ಮಿಶ್ರಿತ ಆಹಾರವನ್ನು ಬೇಯಿಸಿದ್ದು, ಆ ಮನೆ ಸದಸ್ಯರು ಅದನ್ನು ಸೇವಿಸಿದ್ದಾರೆ.

ಆಹಾರ ಸೇವಿಸಿದ ಸ್ವಲ್ಪ ಸಮಯದಲ್ಲೇ ಮೂವರು ವಯಸ್ಕರು ಮತ್ತು ಮೂವರು ಮಕ್ಕಳು ಹೊಟ್ಟೆನೋವು, ವಾಕರಿಕೆ, ತಲೆತಿರುಗುವಿಕೆ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅವರನ್ನು ತಕ್ಷಣ ಕಡಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಸ್ಥಿತಿ ಗಂಭೀರವಾಗಿರುವುದರಿಂದ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ರವಾನಿಸಲಾಗಿದೆ. 

ವೈದ್ಯರ ಪ್ರಕಾರ, ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಿತ್ರ ಘಟನೆಯ ಬಗ್ಗೆ ವೈದ್ಯರು ಮತ್ತು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.