State News

ಪಾದರಸ ಇಂಜೆಕ್ಷನ್ ನೀಡಿ ಪತ್ನಿ ಕೊಲೆ: ಪತಿ, ಮಾವನ ವಿರುದ್ಧ ಪ್ರಕರಣ ದಾಖಲು

admincoorgdaily

ಆನೇಕಲ್: ಪತ್ನಿಗೆ ವಿಷಕಾರಿ ಪಾದರಸವನ್ನು ಇಂಜೆಕ್ಷನ್ ಮೂಲಕ ನೀಡಿ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 

ಸಾವಿಗೀಡಾದ ವಿದ್ಯಾ (37) ಅವರು ಚಿಕಿತ್ಸೆ ಪಡೆಯುತ್ತಿದ್ದಾಗಲೇ ದಾಖಲಿಸಿದ ದೂರಿನ ಆಧಾರವಾಗಿ ಪೊಲೀಸರು ಪತಿ ಬಸವರಾಜ್ ಅವರನ್ನು ಬಂಧಿಸಿ, ಮಾವ ಮರಿಸ್ವಾಮಾಚಾರಿ ಸೇರಿದಂತೆ ಇಬ್ಬರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ವಿದ್ಯಾ ಅವರು ಫೆಬ್ರವರಿ 26ರ ಶಿವರಾತ್ರಿಯಂದು ಪತಿ ಹಾಗೂ ಮಾವ ಸಂಚು ರೂಪಿಸಿ ಮೊದಲು ತಮ್ಮನ್ನು ಪ್ರಜ್ಞೆ ತಪ್ಪಿಸಿ, ನಂತರ ಬಲಗಾಲಿಗೆ ಪಾದರಸ ಇಂಜೆಕ್ಷನ್ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು. ಮರುದಿನ ಕಾಲಿನಲ್ಲಿ ಉಂಟಾದ ಊತ ಹಾಗೂ ದೈಹಿಕ ಅಸ್ವಸ್ಥತೆಯಿಂದ ಮೊದಲಿಗೆ ಅತ್ತಿಬೆಲೆ ಆಸ್ಪತ್ರೆಗೆ, ಬಳಿಕ ಹೆಚ್ಚಿನ ತಪಾಸಣೆಗೆ ಆಕ್ಸಫರ್ಡ್ ಆಸ್ಪತ್ರೆಗೆ ತೆರಳಬೇಕಾಯಿತು. ಇಲ್ಲಿ ನಡೆದ ಪರೀಕ್ಷೆಯಲ್ಲಿ ದೇಹದಲ್ಲಿ ವಿಷಕಾರಿ ಪಾದರಸದ ಅಂಶ ಪತ್ತೆಯಾಗಿತ್ತು.

ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಪಾದರಸ ದೇಹದ ವಿವಿಧ ಅಂಗಾಂಗಗಳಿಗೆ ಹರಡಿದ ಪರಿಣಾಮ ಕಿಡ್ನಿ ವೈಫಲ್ಯ ಉಂಟಾಗಿ ಡಯಾಲಿಸಿಸ್ ಮಾಡಬೇಕಾಯಿತು. ಹಲವು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾ ಸೋಮವಾರ ಮೃತಪಟ್ಟಿದ್ದಾರೆ.

ಮದುವೆಯಾದ 2020ರಿಂದಲೇ ಪತಿ ಮತ್ತು ಮಾವನಿಂದ ನಿರಂತರ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ವಿದ್ಯಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು. “ನನ್ನನ್ನು ‘ಹುಚ್ಚಿ’ ಎಂದು ಸುಳ್ಳು ಹರಡಲಾಗುತ್ತಿತ್ತು. ಬೈಯ್ಯಲಾಗುತ್ತಿತ್ತು, ಹಲ್ಲೆ ಮಾಡಲಾಗುತ್ತಿತ್ತು. ಕೊನೆಗೆ ಸಾಯಿಸುವ ಉದ್ದೇಶದಿಂದಲೇ ಪಾದರಸ ಇಂಜೆಕ್ಷನ್ ಮಾಡಿದ್ದಾರೆ,” ಎಂದು ಅವರು ಬರೆದಿದ್ದರು.

ಶಿವಮೊಗ್ಗ ಮೂಲದ ವಿದ್ಯಾ ಮತ್ತು ಅತ್ತಿಬೆಲೆ ಮೂಲದ ಬಸವರಾಜ್ 2020ರಲ್ಲಿ ಮದುವೆಯಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ.

ಅತ್ತಿಬೆಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ವೈದ್ಯಕೀಯ ವರದಿಗಳ ಸಂಪೂರ್ಣ ವಿಶ್ಲೇಷಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.