ಪ್ರಿಯತಮನೊಂದಿಗೆ ಎಸ್ಕೇಪ್ ಆಗಿದ್ದ ಪತ್ನಿಗೆ ಪೊಲೀಸ್ ಠಾಣೆಯಲ್ಲೇ ಗುಂಡಿಕ್ಕಿ ಹತ್ಯೆ
ನವದೆಹಲಿ, ಜ.14: ಪತ್ನಿ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಗಂಡನೊಬ್ಬ ಪೊಲೀಸ್ ಠಾಣೆಯ ಆವರಣದಲ್ಲೇ ಆಕೆಗೆ ಗುಂಡಿಕ್ಕಿ ಹತ್ಯೆಗೈದ ಘಟನೆ ದಿಲ್ಲಿಯಲ್ಲಿ ನಡೆದಿದೆ. ಈ ಘಟನೆ ಪೊಲೀಸ್ ಭದ್ರತಾ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಅನೂಪ್–ಸೋನಿ ದಂಪತಿ 17 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ತಿಂಗಳ 7ರಂದು ಸೋನಿ ಗಂಡನನ್ನು ಬಿಟ್ಟು ಸುರ್ಜೀತ್ ಎಂಬ ವ್ಯಕ್ತಿಯೊಂದಿಗೆ ಹೊರಟುಹೋಗಿದ್ದಳು. ಈ ಕುರಿತು ಅನೂಪ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ. ದೂರಿನ ಆಧಾರದಲ್ಲಿ ಜನವರಿ 11ರಂದು ಪೊಲೀಸರು ಸೋನಿಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದು, ಬಳಿಕ ವಿಚಾರಣೆಗೆಂದು ಪಾಲಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಿದ್ದರು.
ಸೋಮವಾರ ಬೆಳಿಗ್ಗೆ ಸೋನಿ ಠಾಣೆಯ ಕ್ಯಾಂಟೀನ್‌ಗೆ ತಿಂಡಿ ತಿನ್ನಲು ತೆರಳುತ್ತಿದ್ದ ವೇಳೆ, ಅಲ್ಲಿಯೇ ಅಡಗಿಕೊಂಡಿದ್ದ ಅನೂಪ್ ಅಚಾನಕ್ ದಾಳಿ ನಡೆಸಿ ತನ್ನ ಬಳಿ ಇದ್ದ ಗನ್‌ನಿಂದ ಆಕೆಗೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಸೋನಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಘಟನೆಯ ಬಳಿಕ ಆರೋಪಿ ಅನೂಪ್‌ನನ್ನು ಗನ್ ಸಹಿತವಾಗಿ ಬಂಧಿಸಲಾಗಿದೆ. ವಿಧಿವಿಜ್ಞಾನ ತಂಡ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿದೆ. ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯ ಪಾತ್ರವನ್ನು ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.