ತಾರಕಕ್ಕೇರಿದ ವನ್ಯಜೀವಿ ಸಂಘರ್ಷ | “ನಮ್ಮನ್ನು ರಕ್ಷಿಸಿ” ಎಂದು ಅರಣ್ಯಭವನದ ಮುಂದೆ ಆರ್‌ಎಫ್‌ಒಗಳ ಪ್ರತಿಭಟನೆ ಉನ್ನತಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

Nov 11, 2025 - 12:45
 0  727
ತಾರಕಕ್ಕೇರಿದ ವನ್ಯಜೀವಿ ಸಂಘರ್ಷ | “ನಮ್ಮನ್ನು ರಕ್ಷಿಸಿ” ಎಂದು ಅರಣ್ಯಭವನದ ಮುಂದೆ ಆರ್‌ಎಫ್‌ಒಗಳ ಪ್ರತಿಭಟನೆ ಉನ್ನತಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
Photo credit: Prajavani

ಬೆಂಗಳೂರು: ಮಾನವ–ವನ್ಯಜೀವಿ ಸಂಘರ್ಷದ ಸಂದರ್ಭಗಳಲ್ಲಿ ಜೀವ ಪಣವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆಳಹಂತದ ಅಧಿಕಾರಿಗಳು, ಸಿಬ್ಬಂದಿಗೆ ಇಲಾಖೆಯಿಂದ ರಕ್ಷಣೆಯ ಭರವಸೆ ಇಲ್ಲ, ಉನ್ನತಾಧಿಕಾರಿಗಳ ಬೆಂಬಲ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದ ವಲಯ ಅರಣ್ಯಾಧಿಕಾರಿಗಳು (ಆರ್‌ಎಫ್‌ಒಗಳು) ಸೋಮವಾರ ನಗರದಲ್ಲಿ ಧರಣಿ ನಡೆಸಿದರು.

ನಗರದ ಮಲ್ಲೇಶ್ವರಂನ ಅರಣ್ಯಭವನದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಆರ್‌ಎಫ್‌ಒಗಳ ಸಂಘದ ಅಧ್ಯಕ್ಷ ಚಂದ್ರಶೇಖರರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಕಿರಣ್ ನೇತೃತ್ವವಹಿಸಿದ್ದರು. ಪ್ರತಿಭಟನೆ ರಾತ್ರಿವರೆಗೂ ಮುಂದುವರಿಯಿತು.

ಇತ್ತೀಚಿನ ದಿನಗಳಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿ ಮತ್ತು ಸೆರೆಹಿಡಿಯುವ ಕಾರ್ಯಾಚರಣೆಗಳು ನಡೆದಿವೆ. ಈ ವೇಳೆ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿದ್ದಾಗ ಜನರನ್ನು ನಿಯಂತ್ರಿಸುವ ಹೊಣೆ ಹೊತ್ತಿದ್ದರು. ಈ ಸಂದರ್ಭ ಹುಲಿ ಮತ್ತು ಚಿರತೆಗಳ ದಾಳಿಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಗಾಯಗೊಂಡಿದ್ದರೂ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಬಂದು ವಿಚಾರಿಸದಿರುವುದನ್ನು ಆರ್‌ಎಫ್‌ಒಗಳು ಖಂಡಿಸಿದರು.

“ನಾವು ಪ್ರಾಣಾಪಾಯದಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲಾಖೆಯು ನಮ್ಮ ಹಿತವನ್ನು ಕಾಪಾಡುತ್ತಿಲ್ಲ. ಸರಿಯಾದ ವಾಹನ ಸೌಲಭ್ಯವಿಲ್ಲ, ಗನ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ರೈತ ಸಂಘಗಳ ಟೀಕೆಗಳ ನಡುವೆಯೂ ನಾವು ನಿಂತಿದ್ದೇವೆ. ಆದರೆ ನಮ್ಮ ಮಾತು ಕೇಳುವವರೇ ಇಲ್ಲ,” ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಸಚಿವರು ಅಥವಾ ಅರಣ್ಯ ಪಡೆಗಳ ಮುಖ್ಯಸ್ಥರು ಮನವಿ ಸ್ವೀಕರಿಸಲು ಬಾರದಿರುವುದಕ್ಕೂ ಅಧಿಕಾರಿಗಳು ಅಸಮಾಧಾನಗೊಂಡರು.

ಸ್ಥಳಕ್ಕೆ ಆಗಮಿಸಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಬಿ.ಪಿ. ರವಿ ಹಾಗೂ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಮನ್ವಯ) ಕುಮಾರ ಪುಷ್ಕರ್‌ ಅವರು ಆರ್‌ಎಫ್‌ಒಗಳ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ನೀಡಿದರು. ಆದರೆ ಅದರಿಂದ ತೃಪ್ತಿಯಾಗದ ಆರ್‌ಎಫ್‌ಒಗಳು ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.

“ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗದಿದ್ದರೆ ಹೋರಾಟ ಮಂಗಳವಾರವೂ ಮುಂದುವರಿಯಲಿದೆ. ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ರಕ್ಷಕರ ಸಂಘವೂ ನಮ್ಮ ಬೆಂಬಲಕ್ಕೆ ನಿಂತಿವೆ,” ಎಂದು ಸಂಘಟಕರು ತಿಳಿಸಿದರು.

What's Your Reaction?

Like Like 2
Dislike Dislike 1
Love Love 0
Funny Funny 0
Angry Angry 0
Sad Sad 1
Wow Wow 1