ಕಾಡಾನೆ ದಾಳಿಗೆ ಮಹಿಳೆ ಬಲಿ:ಮೈಸೂರು-ಗೋಣಿಕೊಪ್ಪ ಹೆದ್ದಾರಿ ತಡೆ ನಡೆಸಿ ಆಕ್ರೋಶ
ಗೋಣಿಕೊಪ್ಪ: ಕೊಡಗು ರೈತ ಸಂಘ ಮತ್ತು ಹಸಿರು ಸೇನೆ, ಯುಕೋ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ತಿತಿಮತಿ ನಡೆದ ಮೈಸೂರು-ಗೋಣಿಕೊಪ್ಪ ಹೆದ್ದಾರಿ ತಡೆ ನಡೆಸಿ ಆಕ್ರೋಶ ಹೊರ ಹಾಕಿದರು.
ಶನಿವಾರದಂದು ಕಾಡಾನೆಗೆ ಬಲಿಯಾದ ಐಪಿಎಸ್ ಅಧಿಕಾರಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ ಸಾವಿಗೆ ಅರಣ್ಯ ಇಲಾಖೆ ನೇರ ಹೊಣೆ ಎಂದು ಆರೋಪಿಸಿ ತಿತಿಮತಿಯಲ್ಲಿ ಸುಮಾರು 5 ಗಂಟೆ ಹೆದ್ದಾರಿ ಬಂದ್ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 11.15 ಕ್ಕೆ ಆರಂಭಗೊಂಡ ಹೆದ್ದಾರಿ ತಡೆ ಸುಮಾರು 4.30 ಗಂಟೆವರೆಗೂ ಮುಂದುವರಿಯಿತು. ವಾಹನಗಳು ಸಾಲು ಸಾಲು ನಿಂತು ರಸ್ತೆ ದಾಟಲು ಪರದಾಡಿದವು. ನಂತರ ಪಾಲಿಬೆಟ್ಟ, ಮಾಲ್ದಾರೆ, ಪಿರಿಯಾಪಟ್ಟಣ ಮೂಲಕ ತೆರಳಿತು. ಪ್ರಯಾಣಿಕರು ವಾಹನದಲ್ಲೇ ಕಾಲ ಕಳೆದರು.
ಯುಕೋ ಸಂಘಟನೆ ಮುಖ್ಯಸ್ಥ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಆನೆಗಳ ಸಂಖ್ಯೆ ನಿಯಂತ್ರಣದಿAದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ. ಸರ್ಕಾರ ಸೆಕ್ಷನ್ 370, ಐಪಿಎಸ್ ಸೆಕ್ಷನ್ ಕೂಡ ಬದಲಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದೆ. ಇದೇ ರೀತಿ ಸಂಖ್ಯೆ ನಿಯಂತ್ರಣಕ್ಕೆ ನಿಯಮ ರೂಪಿಸಬೇಕು. ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ ನ್ಯಾಯ ಒದಗಿಸಬೇಕಿದೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಣೆ ಹೊತ್ತು ನ್ಯಾಯ ಒದಗಿಸಲಿ ಎಂದು ಆಗ್ರಹಿಸಿದರು.
ಕಾರ್ಮಿಕ ಸಂಘಟನೆ ಮುಖ್ಯಸ್ಥ ಪಿ. ಆರ್. ಭರತ್ ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾನವ ಹಾನಿಗೆ ಅರಣ್ಯ ಇಲಾಖೆ ಅವೈಜ್ಞಾನಿಕ ನೀತಿ ಕಾರಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಣೆ ಹೊರಬೇಕಿದೆ. ಅರಣ್ಯ ಅಧಿಕಾರಿಗಳು ಹಣ ಲೂಟಿ ಮಾಡಲು ಅವೈಜ್ಞಾನಿಕ ಯೋಜನೆ ರೂಪಿಸಿ ಸಮಸ್ಯೆ ಜೀವಂತವಾಗಿರುವAತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪರಿಹಾರ ಮೊತ್ತ ಜೀವ ಕಳೆದುಕೊಂಡ ಕುಟುಂಬಕ್ಕೆ ಅನಿವಾರ್ಯವಲ್ಲ. ಆನೆಗಳು ನಾಡಿಗೆ ಬಾರದ ರೀತಿ ಅರಣ್ಯದಲ್ಲಿಯೇ ಕೂಡಿ ಹಾಕುವ ಯೋಜನೆ ಮುಖ್ಯ ಎಂದರು.
ಕೊಡಗು ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ಜೀವ ಹಾನಿ ಬಗ್ಗೆ ಸರ್ಕಾರಗಳು ಸೂಕ್ತ ನಿರ್ಧಾರ ತೆಗೆದುಕೊಂಡು ಜನರ ಜೀವ ಉಳಿಸಲು ಪ್ರಯತ್ನ ನಡೆಸಬೇಕು. ಇದೇ ರೀತಿ ಮುಂದುವರಿದರೆ ರಾಜ್ಯ ವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳುವ ಕಠಿಣ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಚೆಟ್ರುಮಾಡ ಸುಜಯ್ ಬೋಪಯ್ಯ, ಚೆಪ್ಪುಡೀರ ಕಾರ್ಯಪ್ಪ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ, ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅಧ್ಯಕ್ಷ ಡಾ. ಚೆಪ್ಪುಡೀರ ಕುಶಾಲಪ್ಪ, ಮುಖಂಡ ಸಿ. ಕೆ. ಬೋಪಣ್ಣ, ಪಿರಿಯಾಪಟ್ಟಣ ಮತ್ತು ಹೊರ ಜಿಲ್ಲೆಗಳ ರೈತ ಮುಖಂಡರುಗಳು ಮಾತನಾಡಿ, ಆಕ್ರೋಶ ವ್ಯಕ್ತಪಡಿಸಿದರು. ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.
ಕಾಡಾನೆ ಸಂಖ್ಯೆ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ರೂಪಿಸಲು ನ್ಯಾಯಯುತವಾಗಿ ಕೈಜೋಡಿಸುವುದಾಗಿ ಸಂಸದ ಯದುವೀರ್ ಒಡೆಯರ್ ಮತ್ತು ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಕಾಡಾನೆಗೆ ತುತ್ತಾದ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಲಾಗಿಲ್ಲ ಎಂಬ ನೋವನ್ನು ಹಂಚಿಕೊAಡರು. ಅರಣ್ಯ ಇಲಾಖೆ ಇದ್ದರೂ ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.
ಶಾಶಕ ಎ. ಎಸ್. ಪೊನ್ನಣ್ಣ ಮಾತನಾಡಿ, ಕಾಡಾನೆ ತಡೆಗೆ ಸರ್ಕಾರ ಕೂಡ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳ್ಳದ ಕಾರಣ ಸಾವು ನಡೆದಿದೆ. ಇದರಲ್ಲಿ ಹಿಂದಿನ ಶಾಸಕರು, ಈಗಿನ ಶಾಸಕರು, ಸಂಸದರನ್ನು ಬೊಟ್ಟು ಮಾಡುವ ವಿಚಾರಕ್ಕಿಂತ ಪರಿಹಾರ ಕಂಡುಕೊಳ್ಳಲಾಗುತ್ತಿಲ್ಲ ಎಂಬ ನೋವು ಅಸಹಾಯಕತೆ ಇದೆ. ಯಾರು ಕೂಡ ಸಾವು ಬಯಸುವುದಿಲ್ಲ. ಈ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಮಲೆನಾಡು ಭಾಗದ ಶಾಸಕರು ಕೂಡ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ, ಸಂಖ್ಯೆ ನಿಯಂತ್ರಣದ ಬಗ್ಗೆ ನಿರ್ಧಾರ ತಿಳಿಸಲಾಗಿದೆ. ಇದರಿಂದ ಮಾತ್ರ ಪರಿಹಾರ ಸಾಧ್ಯ. ಈ ಬಗ್ಗೆ ಕಠಿಣ ನಿರ್ಧಾರ ಅಗತ್ಯ. ಸಂಸದರು ಕೂಡ ಈ ಬಗ್ಗೆ ಸ್ಪಷ್ಟತೆ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯ ಮಂತ್ರಿಗಳ ನಿಯೋಜನೆ ನಂತರ ನೇರವಾಗಿ ಕೊಡಗು ಜಿಲ್ಲೆಯಲ್ಲಿ ವಿಶೇಷ ಸಭೆ ನಡೆಸಿ, ಕಾರ್ಯಗತಗೊಳಿಸಲು ಮುಂದಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಯದುವೀರ್ ಒಡೆಯರ್ ಮಾತನಾಡಿ, ಗಡಿಭಾಗದಲ್ಲಿ ಸಮಸ್ಯೆ ಕಠಿಣ ಸ್ಥಿತಿ ಇದೆ. ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ವನ್ಯಜೀವಿ ಸಂಘರ್ಷ ತೊಂದರೆ ಹೆಚ್ಚು. ವನ್ಯಜೀವಿ ಬದುಕಿಗೆ ಪೂರಕವಾಗಿ ಭೂಪ್ರದೇಶದ ಮಿತಿ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ನೇರವಾಗಿ ಕೇಂದ್ರದ ಅನುಮತಿ ಇಲ್ಲದೆ ತೊಡಗಿಕೊಳ್ಳಬಹುದಾಗಿದೆ. ಸಂಖ್ಯೆ ನಿಯಂತ್ರಣಕ್ಕೆ ಪರ‍್ವಸತಿ ಅಥವಾ ಯಾವುದೇ ಕ್ರಮಕ್ಕೂ ಸೂಕ್ತ ಬೆಂಬಲ ನೀಡಲಾಗುವುದು. ಕಠಿಣ ಕ್ರಮಕ್ಕೂ ಬೆಂಬಲ ನೀಡಲಾಗುವುದು. ಹೋರಾಟಗಾರರ ಜತೆಯಲ್ಲಿ ನಾವು ಕೂಡ ಇರುತ್ತೇವೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು, ಚುನಾವಣೆ ಸಂದರ್ಭ ಕೂಡ ಕಾಡಾನೆ ದಾಳಿ ಎದುರಿಸಿ ನಿದರ್ಶನ ಇದೆ. ಇದರಿಂದಾಗಿ ಅರಣ್ಯ ಇಲಾಖೆ ಸೂಕ್ತ ಅಧ್ಯಯನ ನಡೆಸಿ ಕ್ರಮಕ್ಕೆ ಮುಂದಾಗಬೇಕಿದೆ. ಕ್ರಮ ಸಂತೋಷಕರವಲ್ಲದಿದ್ದರೂ ಅನುಷ್ಠಾನ ಮುಖ್ಯ ಎಂದು ಅರಣ್ಯ ಇಲಾಖೆಗೆ ಸೂಚಿಸಿದರು. ಜನಪ್ರತಿನಿಧಿಗಳು ಪ್ರತಿಭಟನೆಯ ಭಾಗವಾಗಿ ಕಾರ್ಯನಿರ್ವಹಿಸಿದರು.
ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ನಾಗರಹೊಳೆ ಪ್ರಭಾರ ಡಿಸಿಎಫ್ ಕಿರುಂಬನಮ್ ಹೋರಾಟಗಾರರ ಮನವಿ ಆಲಿಸಿ, ಸರ್ಕಾರದಿಂದ ನಡೆಯುತ್ತಿರುವ ಯೋಜನೆ ಬಗ್ಗೆ ತಿಳಿಸಿದರು.
What's Your Reaction?
Like
0
Dislike
0
Love
0
Funny
1
Angry
0
Sad
0
Wow
0
