ಕೋಲಾರದಲ್ಲಿ ಮಹಿಳೆಯ ಹತ್ಯೆ; ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದಾಕೆ ಶವವಾಗಿ ಪತ್ತೆ!

Oct 8, 2025 - 20:21
 0  1.1k
ಕೋಲಾರದಲ್ಲಿ ಮಹಿಳೆಯ ಹತ್ಯೆ; ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದಾಕೆ ಶವವಾಗಿ ಪತ್ತೆ!
ಹತ್ಯೆಯಾದ ಮಹಿಳೆ

ಕೋಲಾರ, ಅ.08: ಕೋಲಾರ ತಾಲ್ಲೂಕಿನ ಚಲುವನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದ ಮಹಿಳೆ ಕೆಲವೇ ಗಂಟೆಗಳಲ್ಲಿ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತರನ್ನು ಕೋಲಾರ ತಾಲೂಕಿನ ಬೆಳ್ಳೂರು ಗ್ರಾಮದ ನಿವಾಸಿ ಮಾಲಾ (40) ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಅವರ ತಲೆಗೆ ಕಲ್ಲು ಎತ್ತಿಹಾಕಿ ಅಥವಾ ಬಲವಾದ ವಸ್ತುವಿನಿಂದ ಹೊಡೆದು ಹತ್ಯೆಗೈದಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಶಂಕಿಸಿದ್ದಾರೆ. ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಮಾಲಾ ಅವರು ಸುಮಾರು ಈ ಹಿಂದೆ ಸಂಬಂಧಿಯೊಬ್ಬರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಇದ್ದು, ನಂತರ ಗಂಡ ಮತ್ತೊಂದು ಮದುವೆ ಮಾಡಿಕೊಂಡ ಕಾರಣದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಗಳ ವಿವಾಹದ ಬಳಿಕ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಉಪ್ಪಿನಕಾಯಿ ತಯಾರಿಕಾ ಘಟಕದಲ್ಲಿ ಅವರು ನೌಕರಿಯಾಗಿದ್ದರು.

ಬುಧವಾರ ಮುಂಜಾನೆ ಸಹೋದ್ಯೋಗಿಗಳೊಂದಿಗೆ ಆಂಧ್ರದ ಬಾಯಿಕೊಂಡ ದೇವಾಲಯಕ್ಕೆ ಹೋಗುವ ಉದ್ದೇಶದಿಂದ ಮನೆಯಿಂದ ಹೊರಟಿದ್ದರು. ಆದರೆ ಬೆಳಗಿನ ವೇಳೆಗೆ ಚಲುವನಹಳ್ಳಿ ಗ್ರಾಮದ ಹೊರ ಹೊಲದಲ್ಲಿ ಮಾಲಾ ಶವವಾಗಿ ಪತ್ತೆಯಾಗಿದ್ದಾರೆ.

ಮಾಲಾ ಅವರ ಕುಟುಂಬದಲ್ಲಿ ಜಮೀನಿನ ಹಂಚಿಕೆ ಸಂಬಂಧಿತ ವಿವಾದವಿದ್ದು, ವಿಷಯ ನ್ಯಾಯಾಲಯದ ಹಂತ ತಲುಪಿತ್ತು. ಇತ್ತೀಚೆಗೆ ಆ ಜಮೀನು ಮಾರಾಟ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆ ಕೌಟುಂಬಿಕ ವೈಷಮ್ಯದಿಂದಲೇ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0