ರಾಷ್ಟ್ರೀಯ ಮಕ್ಕಳ ಆಯೋಗದಿಂದ ಕಾರ್ಯಾಗಾರ ಚಿಕ್ಕ ಮಕ್ಕಳಲ್ಲಿ ಒತ್ತಡ ಹೇರದೆ ಒಳ್ಳೆಯ ಸಲಹೆ ಮಾರ್ಗದರ್ಶನ ನೀಡಿ: ಶುಭ
ಮಡಿಕೇರಿ ಫೆ.27:-ಮಕ್ಕಳ ಮೇಲೆ ಒತ್ತಡ ಹೇರದೆ, ಒಳ್ಳೆಯ ಸಲಹೆ-ಮಾರ್ಗದರ್ಶನ ನೀಡುವುದರ ಜತೆಗೆ ಧೈರ್ಯ ತುಂಬಿ ಮಕ್ಕಳ ಮನಸ್ಸನ್ನು ಪೋಷಕರು ಗೆಲ್ಲುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಪ್ರತಿಪಾಧಿಸಿದ್ದಾರೆ.
ಕೊಡಗು ಜಿಲ್ಲಾಡಳಿತ, ನವದೆಹಲಿಯ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇವರ ಸಹಯೋಗದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಯ ಭಾಗೀಧಾರರಿಗೆ ಮಕ್ಕಳ ಹಕ್ಕುಗಳನ್ನು ಅನುಷ್ಠಾನಗೊಳಿಸಲು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿವಿಧ ಕಾಯ್ದೆಗಳ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲರ ಕುಟುಂಬದಲ್ಲೂ ಮಕ್ಕಳ ಮೇಲೆ ಪ್ರತೀ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ ಸೃಷ್ಟಿಸುತ್ತಿದ್ದು, ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ಮಾಡಿದರು.
ಮಕ್ಕಳಿಗೆ ಪರೀಕ್ಷೆಯ ಫಲಿತಾಂಶದ ಅಂಕ ಮತ್ತು ಅಕ್ಕಪಕ್ಕದ ವಿದ್ಯಾರ್ಥಿಗಳ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ, ಇಂತಹ ಹೋಲಿಕೆಯು ಚಿಕ್ಕ ಮಕ್ಕಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಆದ್ದರಿಂದ ವಿಶಾಲ ಹಾಗೂ ವಿಸ್ತಾರವಾಗಿ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ವಿವರಿಸಿದರು.
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಫಲಿತಾಂಶವೇ ಕೊನೆಯಲ್ಲ ಎಂಬ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಆದರೂ ಸಹ ಮಕ್ಕಳಲ್ಲಿ ಒತ್ತಡ ಹೇರಬಾರದು. ಆ ನಿಟ್ಟಿನಲ್ಲಿ ಪೋಷಕರು ಮತ್ತು ಸಮಾಜದ ಜವಾಬ್ದಾರಿ ಹೆಚ್ಚಿನದ್ದಾಗಿದ್ದು, ಮಕ್ಕಳ ಮನಸ್ಸನ್ನು ಗೆಲ್ಲಬೇಕು ಎಂದು ಅವರು ನುಡಿದರು.
ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಓಡುತ್ತಿದ್ದು, ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಿದ್ದೇವೆ. ಆದರೆ ನೆಮ್ಮದಿ ಇದೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಶುಭ ಅವರು ನುಡಿದರು.
ಮಕ್ಳಳ ಮೇಲೆ ಆಗುವ ದೌರ್ಜನ್ಯ ನಿಂತಿದೆಯೇ ಎಂಬ ಬಗ್ಗೆ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಪೋಕ್ಸೋ ಪ್ರಕರಣಗಳು ಕಡಿಮೆ ಆಗಿಲ್ಲ, ಸಾಕಷ್ಟು ಅರಿವು ಮೂಡಿಸಿದರೂ ಸಹ ಕಡಿಮೆಯಾಗುತ್ತಿಲ್ಲ. ಸಮಾಜವು ಎಲ್ಲಿ ಎಡವುತಿದೆ ಎಂಬ ಬಗ್ಗೆ ನಾವುಗಳೇ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದು ಶುಭ ಅವರು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ಮೇಲೆ ಆಗುವ ದೌರ್ಜನ್ಯ ತಡೆಯುವಲ್ಲಿ ಆಡಳಿತ ವ್ಯವಸ್ಥೆ ಮತ್ತು ಸಮಾಜ ಮನಸ್ಸು ಹೃದಯದಿಂದ ಕೆಲಸ ಮಾಡಬೇಕು ಎಂದು ಕೋರಿದರು. ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು, ಎಲ್ಲರಂತೆ ಬದುಕುವ ಹಕ್ಕು ಇದ್ದು, ಅದರಂತೆ ನಡೆದುಕೊಳ್ಳಬೇಕು ಎಂದರು.
ಪೋಕ್ಸೋ ಪ್ರಕರಣದಲ್ಲಿ ಸಣ್ಣ ಸಣ್ಣವರೆ ಜೈಲು ಸೇರುತ್ತಿದ್ದಾರೆ. ಇದರಿಂದ ಕುಟುಂಬದ ಆರ್ಥಿಕ ನಷ್ಟ ಮತ್ತು ಮಾನಸಿಕ ಹಿಂಸೆಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಇಂತಹ ಪ್ರಕರಣಗಳನ್ನು ತಡೆಯುವಲ್ಲಿ ಮಕ್ಕಳಿಗೆ ಪೋಷಕರು ಸಮಯ ನೀಡಬೇಕು. ಮಕ್ಕಳಂತೆ ನಾವು ಯೋಚಿಸಬೇಕು. ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂದು ಶುಭ ಅವರು ವಿವರಿಸಿದರು.
ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಆರೈಕೆ ಮಾಡಬೇಕು. ವಿಶೇಷ ಗಮನ ಹರಿಸಬೇಕು. ಪ್ರತೀ ಮಗುವಿನಲ್ಲೂ ಸಹ ಒಂದಲ್ಲ ಒಂದು ರೀತಿಯ ವಿಶೇಷತೆ ಇದ್ದು, ವಿಶೇಷತೆಯ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ನುಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಅವರು ಮಾತನಾಡಿ ಪ್ರತಿಯೊಂದು ಕುಟುಂಬಕ್ಕೂ ಹಾಗೂ ಸಮಾಜಕ್ಕೂ ಮಕ್ಕಳೇ ಸಂಪತ್ತಾಗಿದ್ದು, ಮಕ್ಕಳ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಬೇಕಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಯಕ್ಕೆ ತಕ್ಕಂತೆ ಫಲಿತಾಂಶ ಪಡೆದು ಬದುಕುವುದು ಅತ್ಯಗತ್ಯ. ಆದರೆ ಮಕ್ಕಳಲ್ಲಿ ಯಾವುದೇ ಕಾರಣಕ್ಕೂ ಒತ್ತಡ ತರಬಾರದು ಎಂದರು.
ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು. ಮಕ್ಕಳ ಅಭಿವೃದ್ಧಿ ಮತ್ತು ವಿಕಾಸಕ್ಕೆ ಒತ್ತು ನೀಡಬೇಕು. ಜೊತೆಗೆ ಮೂಲ ಸೌಲಭ್ಯವನ್ನು ಕಲ್ಪಿಸಬೇಕು ಎಂದು ವೆಂಕಟೇಶ್ ಅವರು ಹೇಳಿದರು.
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ನಿಲ್ಲಬೇಕು. ಕಾನೂನಿನ ಬಗ್ಗೆ ಎಲ್ಲೆಡೆ ಮಾಹಿತಿ ನೀಡಬೇಕು. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಇನ್ನಷ್ಟು ಜಾಗೃತಿ ಕಾರ್ಯಕ್ರಮ ನಡೆಯಬೇಕು ಎಂದು ವೆಂಕಟೇಶ್ ಅವರು ಹೇಳಿದರು.
ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಲ್ಲಿ, ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಶಾಲಾ ಶಿಕ್ಷಣ ಇಲಾಖೆ, ಪೊಲೀಸ್, ಕಾರ್ಮಿಕ ಇಲಾಖೆ ಹೀಗೆ ವಿವಿಧ ಇಲಾಖೆಗಳು ಕೈಜೋಡಿಸಿ ಸಮನ್ವಯತೆಯಿಂದ ಕೆಲಸ ಮಾಡಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾದ ಡಾ.ಕೆ.ರಾಘವೇಂದ್ರ ಭಟ್ ಅವರು ಬಾಲನ್ಯಾಯ ಕಾಯಿದೆ ಹಾಗೂ ಪೆÇೀಕ್ಸೊ ಕಾಯಿದೆಯ ಕುರಿತು ಮತ್ತು ಮಕ್ಕಳ ಹಕ್ಕುಗಳ ಕುರಿತು ವಿವರವಾಗಿ ತಿಳಿಸಿದರು.
ನವದೆಹಲಿಯ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಲಹೆಗಾರರಾದ ಶುಭಿ ಶರ್ಮಾ ಅವರು ಮಕ್ಕಳ ಮೇಲೆ ದೈಹಿಕ ದಂಡನೆ ಕುರಿತ ಕಾಯ್ದೆ ಕುರಿತು ಮತ್ತು ಇದರಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು. ಅದೇ ರೀತಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾರ್ಯವೈಖರಿಗಳ ಕುರಿತು ವಿವರಿಸಿದರು.
. ಜಿ.ಪಂ.ಉಪ ಕಾರ್ಯದರ್ಶಿ ಚಂದ್ರಶೇಖರ್, ತಹಶೀಲ್ದಾರ್ ಶ್ರೀಧರ, ಡಯಟ್ ಕೂಡಿಗೆ ಪ್ರಾಂಶುಪಾಲರಾದ ಅರಸ್, ಇತರರು ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ಹೊನ್ನೇಗೌಡ ಸ್ವಾಗತಿಸಿದರು. ಮಧು ಪ್ರಾರ್ಥಿಸಿದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ನಿರೂಪಿಸಿ, ವಂದಿಸಿದರು.