ಸಾಹಿತ್ಯ ಲೋಕದ ಅನರ್ಘ್ಯ ರತ್ನ ಎಸ್‌ಎಲ್ ಭೈರಪ್ಪ ನಿಧನಕ್ಕೆ ಯದುವೀರ್ ಸಂತಾಪ
ಮೈಸೂರು: ಸಾಹಿತ್ಯ ಲೋಕದ ಅನರ್ಘ್ಯ ರತ್ನ, ಮೈಸೂರಿನ ಮುಕುಟಮಣಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ನಿಧನಕ್ಕೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಲ್. ಭೈರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದರು, ಹಿರಿಯ ಸಾಹಿತಿಗಳ ನಿಧನದಿಂದ ಸಾರಸ್ವತ ಲೋಕ ಪ್ರಮುಖ ಕೊಂಡಿಯನ್ನು ಕಳೆದುಕೊಂಡಂತಾಗಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಪ್ರಶಸ್ತಿಗಳಿಗೇ ಸಮ್ಮಾನ ತಂದುಕೊಟ್ಟವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್, ಪದ್ಮಭೂಷಣ, ಪದ್ಮಶ್ರೀ, ನಾಡೋಜ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರೊಂದಿಗೆ ಕೆಲವು ಬಾರಿ ಸಂವಾದ ನಡೆಸುವ ಅವಕಾಶ ನಡೆಸುವ ಅವಕಾಶ ಸಿಕ್ಕಿದ್ದು ಜೀವನ ಮಹತ್ವದ ಕ್ಷಣಗಳಾಗಿವೆ. ಕೆಲವರ ವ್ಯಕ್ತಿತ್ವಗಳೇ ಹಾಗೆ. ಅವರಿಗೆ ಪ್ರಶಸ್ತಿ ಬಂದಿದೆ ಎನ್ನುವುದಕ್ಕಿಂತ ಅವರಿಂದ ಪ್ರಶಸ್ತಿಗಳಿಗೇ ಸಮ್ಮಾನ ಪಡೆಯುತ್ತದೆ.
ಅಂಥ ಮಹನೀಯರ ಸಾಲಿನಲ್ಲಿ ಎಸ್‌ಎಲ್ ಭೈರಪ್ಪನವರು ಇದ್ದಾರೆ ಎಂದು ಸಂಸದರು ಸ್ಮರಿಸಿದ್ದಾರೆ. ಕನ್ನಡ ಸಾರಸ್ವತ ಲೋಕ ಮಾತ್ರವಲ್ಲದೇ, ಹಿಂದಿ, ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಗಳಿಗೆ ಇವರ ಕಾದಂಬರಿಗಳು ಅನುವಾದಗೊಂಡಿದ್ದು, ಶ್ರೀಯುತರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರು. ಲೇಖನಿ ಮೂಲಕ ಎಲ್ಲರನ್ನೂ ಸೆಳೆದುಕೊಂಡಿದ್ದ ಶ್ರೀಯುತರು, ತಮ್ಮ ಆದಾಯವನ್ನು ಸಮಾಜ ಸೇವೆಗೆ ಮೀಸಲಿರಿಸಿ ಜನಮಾನಸದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದಾರೆ ಎಂದು ಯದುವೀರ್ ತಿಳಿಸಿದ್ದಾರೆ.
ಮೈಸೂರಿಗೆ ಕೀರ್ತಿ ತಂದುಕೊಟ್ಟವರು
ಹಾಸನದ ಚನ್ನರಾಯಪಟ್ಟಣದಲ್ಲಿ ಜನಿಸಿದ್ದರೂ ಭೈರಪ್ಪನವರಿಗೂ, ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಪ್ರೌಢಶಿಕ್ಷಣ, ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಸಾಂಸ್ಕೃತಿಕ ರಾಜಧಾನಿಯಲ್ಲೇ ಪೂರೈಸಿ ಇಲ್ಲಿಯೇ ನೆಲೆ ಕಂಡುಕೊಂಡಿದ್ದರು. ಭೈರಪ್ಪನವರ ಮೂಲಕವೂ ಮೈಸೂರು ವಿಶೇಷ ಸ್ಥಾನಪಡೆದುಕೊಂಡಿದೆ ಎಂದು ಸಂಸದರು ತಿಳಿಸಿದ್ದಾರೆ.
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದವರು
ಮತದಾನ, ವಂಶವೃಕ್ಷ, ಗೃಹಭಂಗ, ಗ್ರಹಣ, ದಾಟು, ಅನ್ವೇಷಣ, ಪರ್ವ, ಮಂದ್ರ, ಆವರಣ, ಯಾನ ಸೇರಿದಂತೆ ಹಲವಾರು ಕಾದಂಬರಿಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿದೆ. ಅವರು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಕೆಲವು ಕಾದಂಬರಿಗಳು ಚಲನಚಿತ್ರಗಳಾಗಿ ಅಭಿಮಾನಿಗಳಿಗೆ ಮುದ ನೀಡಿವೆ ಎಂದು ಹೇಳಿದ್ದಾರೆ.
ಶ್ರೀಯುತರ ಆತ್ಮಕ್ಕೆ ಶಾಂತಿ ದೊರಕಲಿ
ಭೈರಪ್ಪನವರ ನಿಧನದಿಂದ ನಿಜಕ್ಕೂ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ವರ್ಗ, ಬಂಧು-ಬಳಗದವರಿಗೆ, ಅಪಾರ ಅಭಿಮಾನಿಗಳಿಗೆ ಅವರ ನಿಧನದ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಂಸದ ಯದುವೀರ್ ಒಡೆಯರ್ ಅಕ್ಷರ ನಮನ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.