ಕುಡಿದ ಮತ್ತಿನಲ್ಲಿ ಬಂದೂಕು ಬಳಸಲು ತಿಳಿಯದೆ ಫೈರಿಂಗ್; ಆಸ್ಪತ್ರೆ ಸೇರಿದ ಯುವಕ| ಐದು ವರ್ಷಗಳ ಹಿಂದೆ ಕಳವು ಮಾಡಿದ ಬಂದೂಕು

Oct 28, 2025 - 20:37
 0  1.8k
ಕುಡಿದ ಮತ್ತಿನಲ್ಲಿ ಬಂದೂಕು ಬಳಸಲು ತಿಳಿಯದೆ ಫೈರಿಂಗ್; ಆಸ್ಪತ್ರೆ ಸೇರಿದ ಯುವಕ|   ಐದು ವರ್ಷಗಳ ಹಿಂದೆ ಕಳವು ಮಾಡಿದ ಬಂದೂಕು
Photo credit: Etv bharath

ಕೊಪ್ಪಳ: ಕುಡಿದ ಮತ್ತಿನಲ್ಲಿ ನಾಡಬಂದೂಕು ಪ್ರಯೋಗಿಸಲು ಯತ್ನಿಸಿದ ವೇಳೆ ಗುಂಡುಗಳು ದೇಹಕ್ಕೆ ಹೊಕ್ಕು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕ ಬಿಡನಾಳ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡವರನ್ನು ಆನಂದಗೌಡ ಪಾಟೀಲ್ (29) ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಮದ್ಯಪಾನ ಮಾಡಿದ ಆನಂದಗೌಡ ನಾಡಬಂದೂಕನ್ನು ಹೊರತೆಗೆದು ಫೈರಿಂಗ್ ಮಾಡುವ ಪ್ರಯತ್ನ ಮಾಡಿದಾಗ ನಿಯಂತ್ರಣ ತಪ್ಪಿ, ಗುಂಡುಗಳು ಅವನದೇ ದೇಹಕ್ಕೆ ಹೊಕ್ಕಿವೆ. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ಆನಂದಗೌಡನನ್ನು ಕುಟುಂಬಸ್ಥರು ತಕ್ಷಣ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆನಂದಗೌಡ ಅಕ್ರಮವಾಗಿ ನಾಡಬಂದೂಕನ್ನು ಸಂಗ್ರಹಿಸಿಕೊಂಡಿದ್ದಾನೆ. ಬಂದೂಕಿನ ಬಳಕೆಯ ಅರಿವು ಇಲ್ಲದೆ ಮದ್ಯದ ಅಮಲಿನಲ್ಲಿ ಫೈರಿಂಗ್ ಮಾಡಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.

ಆಘಾತಕಾರಿ ಸಂಗತಿಯೆಂದರೆ, ಆತ ಬಂದೂಕಿಗೆ ಸೈಕಲ್‌ನ ಬಾಲ್ ಬೇರಿಂಗ್‌ಗಳನ್ನು ಗುಂಡಿನಂತೆ ಬಳಸಿದ್ದಾನೆ. ಉಕ್ಕಿನ ಆ ಸಣ್ಣ ಬೇರಿಂಗ್‌ಗಳು ಅವನ ದೇಹಕ್ಕೆ ಹೊಕ್ಕು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಆನಂದಗೌಡ ಈ ನಾಡಬಂದೂಕನ್ನು ಸುಮಾರು ಐದು ವರ್ಷಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ. ಆಗಿನಿಂದ ಅದನ್ನು ಮನೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದಾನೆ ಎಂದು ಹೇಳಿಕೊಂಡಿದ್ದಾನೆ.

ಸದ್ಯ ಕುಕನೂರು ಪೊಲೀಸರು ಬಂದೂಕನ್ನು ವಶಪಡಿಸಿಕೊಂಡಿದ್ದು, ಶಸ್ತ್ರಾಸ್ತ್ರ ಕಾಯ್ದೆ (ಆರ್ಮ್ಸ್ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಅಜಾಗರೂಕವಾಗಿ ಬಂದೂಕು ಪ್ರಯೋಗಿಸಿದ ಆನಂದಗೌಡ ಈಗ ಆಸ್ಪತ್ರೆಯ ಹಾಸಿಗೆಯಲ್ಲಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 1
Funny Funny 3
Angry Angry 0
Sad Sad 0
Wow Wow 0