500 ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳ ಉಚಿತ ಪ್ರಯಾಣ ಕೆಎಸ್‍ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ‘ಶಕ್ತಿ’ ಯೋಜನೆ ಸಂಭ್ರಮಾಚರಣೆ

Jul 14, 2025 - 17:41
Jul 14, 2025 - 17:41
 0  275
500 ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳ ಉಚಿತ ಪ್ರಯಾಣ ಕೆಎಸ್‍ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ‘ಶಕ್ತಿ’ ಯೋಜನೆ ಸಂಭ್ರಮಾಚರಣೆ

ಮಡಿಕೇರಿ :-ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಹಾಗೂ ಮೊದಲ ಕಾರ್ಯಕ್ರಮವಾದ ‘ಶಕ್ತಿ’ ಯೋಜನೆಯಡಿ 500 ಕೋಟಿಗೂ ಹೆಚ್ಚಿನ ಮಹಿಳೆಯರು ರಾಜ್ಯ ಸರ್ಕಾರಿ ಸಂಸ್ಥೆಯ ಬಸ್‍ನಲ್ಲಿ ಉಚಿತವಾಗಿ ಪ್ರಯಾಣಿಸಿರುವ ಹಿನ್ನೆಲೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು.  

ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅಲಂಕೃತಗೊಳಿಸಲಾಗಿದ್ದ ಬಸ್‍ಗೆ ಮಡಿಕೇರಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಂದ್ರಿರ ಮೋಹನ್ ದಾಸ್ ಅವರು ಪೂಜೆ ಸಲ್ಲಿಸಿ, ಮಹಿಳಾ ಪ್ರಯಾಣಿಕರಿಗೆ ಹಾಗೂ ನೆರೆದಿದ್ದವರಿಗೆ ಸಿಹಿ ವಿತರಿಸಿ ಸಂತಸ ಹಂಚಿಕೊಂಡರು.  

ಪಂಚ ಗ್ಯಾರಂಟಿ ಯೋಜನೆಯನ್ನು ಸರ್ಕಾರ ಕಳೆದ 2023 ರ ಜೂನ್, 11 ರಂದು ಜಾರಿಗೊಳಿಸಿದ್ದು, ಈ ಹಿನ್ನೆಲೆ 500 ಕೋಟಿಗೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್ ಉಚಿತ ಸೌಲಭ್ಯವನ್ನು ಪಡೆದಿರುವ ಹಿನ್ನೆಲೆ ಬಸ್ ನಿಲ್ದಾಣದಲ್ಲಿ ನೆರೆದಿದ್ದವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.   ಶಕ್ತಿ ಯೋಜನೆ ಸಂಬಂಧಿಸಿದ ಸಾಧನೆ ಬಿಂಬಿಸುವ ಪ್ಲೆಕ್ಸ್‍ಗಳನ್ನು ಬಸ್ ನಿಲ್ದಾಣದ ಆವರಣದಲ್ಲಿ ಅಳವಡಿಸಲಾಗಿತ್ತು. ಹಲವು ಮಹಿಳೆಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡುಬಂದೀತು.

ಬಳಿಕ ಮಾತನಾಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂದ್ರಿರ ಮೋಹನ್ ದಾಸ್ ಅವರು ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದು, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು. ನಾಡಿನ ಮಹಿಳೆಯರ ಸ್ವಾವಲಂಬನೆ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಇದು ಗ್ಯಾರಂಟಿ ಯೋಜನೆ ಯಶಸ್ವಿಗೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಶಕ್ತಿ ಯೋಜನೆ ಜಾರಿಯಾದ ನಂತರ ಈವರೆಗೆ 500 ಕೋಟಿ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್‍ನಲ್ಲಿ ಪ್ರಯಾಣ ಮಾಡಿದ್ದು, ಇವರಿಗೆ ಒಟ್ಟು 12,000 ಕೋಟಿ ರೂ. ಟಿಕೇಟ್ ಮೌಲ್ಯ ದಾಟಿದೆ ಎಂದು ತಿಳಿಸಿದರು. 

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರಾ ಮೈನಾ ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಹಿನ್ನೆಲೆ ಒಂದು ರೀತಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ ಎಂದರು.  ನಾಡಿನ ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದ್ದು, ಒಂದು ರೀತಿ ಹೆಮ್ಮೆಯಿದೆ. ಶಕ್ತಿ ಯೋಜನೆಯು ಪ್ರತಿ ಮಹಿಳೆಯರ ಕನಸುಗಳನ್ನು ನನಸಾಗಿಸಿ, ನಿಜಾರ್ಥದಲ್ಲಿ ಅವರ ಬದುಕಿಗೆ ಶಕ್ತಿ ತುಂಬಿದೆ ಎಂದು ತೆನ್ನೀರ ಮೈನಾ ನುಡಿದರು. 

ಕೆಎಸ್‍ಆರ್‍ಟಿಸಿ ವಾಹನ ಚಾಲಕರು ಮತ್ತು ನಿರ್ವಾಹಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 2023 ರ ಜೂನ್ ತಿಂಗಳಿನಿಂದ ಇದುವರೆಗೆ 1.21 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.  

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಸದಸ್ಯರಾದ ಪ್ರಭು ರೈ, ರಾಜೇಶ್ವರಿ, ಫ್ಯಾನ್ಸಿ ಪಾರ್ವತಿ, ಶೀರಾಜ್, ರಘು, ಇಬ್ರಾಹಿಂ, ದಯಾನಂದ, ರಂಗಪ್ಪ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ, ಉದಯಕುಮಾರ್, ಪ್ರಕಾಶ್ ಆಚಾರ್ಯ, ತಾ.ಪಂ.ಇಒ ಶೇಖರ್, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಮೆಹಬೂಬ್ ಅಲಿ ಇತರರು ಇದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0