ಕಾಡು ಮಕ್ಕಳ ಕುಂಡೆ ಹಬ್ಬಕ್ಕೆ ವರ್ಣರಂಜಿತ ತೆರೆ!
ಪೊನ್ನಂಪೇಟೆ:ದಕ್ಷಿಣ ಕೊಡಗಿನಲ್ಲಿ ಮಾತ್ರ ನಡೆಯುವ ವಿಶಿಷ್ಟ ಆಚರಣೆಯಾದ ಆದಿವಾಸಿ ಸಮುದಾಯದ ಬೇಡು ಹಬ್ಬವನ್ನು ಗೋಣಿಕೊಪ್ಪಲು ಬಳಿಯ ದೇವರಪುರದಲ್ಲಿ ಸಂಭ್ರಮದಿoದ ಆಚರಿಸಲಾಯಿತು. ಅಶ್ಲೀಲ ಪದಗಳಿಂದ ದೇವರನ್ನು ಆರಾಧಿಸುವ ಕಾಡು ಮಕ್ಕಳ ಕುಂಡೆ ಹಬ್ಬವನ್ನು ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯಿತು. ಎರಡು ದಿನಗಳ ಕಾಲ ಗ್ರಾಮದ ಸುತ್ತಮುತ್ತಲಿನ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು, ರಸ್ತೆ, ಮನೆಗಳಲ್ಲಿ ಹರಕೆ ಹೊತ್ತ ವಿಚಿತ್ರ ವೇಷ ಧರಿಸಿ ಅಶ್ಲೀಲ ಪದ ಬಳಕೆಯೊಂದಿಗೆ ಸಂಗ್ರಹಿಸಿ ತಂದ ಕಾಣಿಕೆಯನ್ನು ದೇವರಪುರದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಹರಕೆಯನ್ನು ಸಲ್ಲಿಸಿದರು. ಮಧ್ಯಾಹ್ನ ಎಲ್ಲಾ ವೇಷಧಾರಿ ಭಕ್ತರು ಅಯ್ಯಪ್ಪ ಭದ್ರಕಾಳಿ, ಬೋಟೆ ಕುರುಬ ದೇವಸ್ಥಾನಕ್ಕೆ ಬಂದು ಆವರಣದಲ್ಲಿ ದೇವರನ್ನು ಹೊಗಳುತ್ತಾ ಕುಣಿದು ಹರಕೆ ಸಲ್ಲಿಸಿದರು. ಹರಕೆ ಹೊತ್ತ ಇಬ್ಬರು ಯುವ ಭಕ್ತರು ಕೊಡವ ಸಂಪ್ರದಾಯದ ಉಡುಪು ಧರಿಸಿ, ತರಗು ವಕ್ಕದ ಬೇಟೆ ಕುರುಬರು ಸಂಗ್ರಹಿಸಿದ ಬಿದಿರಿನ ಕುದುರೆಯನ್ನು ಊರಿನ ಮುಖ್ಯಸ್ಥರು ಹಾಗೂ ಹಿರಿಯರ ಆಶೀರ್ವಾದದೊಂದಿಗೆ ಅಂಬಲದಲ್ಲಿ ಪೂಜೆ ಸಲ್ಲಿಸಿ ಭಂಡಾರ ಪೆಟ್ಟಿಗೆ ಹಾಗೂ ಪಣಿಕರು ತೆಗೆಯುವ ಮೊಗದೊಂದಿಗೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿದರು. ಭದ್ರಕಾಳಿ ದೇವರ ಮೊಗಕ್ಕೆ ಮತ್ತು ಕುದುರೆಗೆ ಪೂಜೆ ಸಲ್ಲಿಸಿದ ನಂತರ ಮೊಗದೊಂದಿಗೆ ಒಡ್ಡೋಲಗ ಸಮೇತ ದೇವರ ಕಾಡಿನಲ್ಲಿ ಭದ್ರಕಾಳಿ ದೇವಸ್ಥಾನಕ್ಕೆ ಪೂಜಾರಿ, ತಕ್ಕ ಮುಖ್ಯಸ್ಥರು, ಊರಿನ ಹಿರಿಯರು ಹಾಗೂ ಭಕ್ತ ವೇಷಧಾರಿಗಳೊಂದಿಗೆ ಗಂಡಸರು ಮಾತ್ರ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿದರು. ಆಹಾರ ಹರಕೆ ಬಳಿಕ ಅಯ್ಯಪ್ಪ ದೇವಸ್ಥಾನಕ್ಕೆ ಬಂದು ಭಕ್ತರು ಹರಕೆ, ಕಾಣಿಕೆ, ಭಂಡಾರದೊಂದಿಗೆ ಅಂಬಲಕ್ಕೆ ತೆರಳಿ ಪೂಜಾ ಪರಿಕರಗಳನ್ನು ಅಲ್ಲಿಟ್ಟು ಭದ್ರಕಾಳಿ ದೇವರ ಮೊಗಕ್ಕೆ ಮೊಗ ಪೂಜೆ ಸಲ್ಲಿಸುವುದರೊಂದಿಗೆ ಎರಡು ದಿನದ ಬೇಡುಹಬ್ಬದ ವಿವರಣೆಯನ್ನು ಮೊಗಪಾಟ್‌ನೊಂದಿಗೆ ದೇವರಿಗೆ ಒಪ್ಪಿಸುವ ಮೂಲಕ ಹಬ್ಬಕ್ಕೆ ತೆರೆ ಬಿದ್ದಿತು.
ವರದಿ: ಚಂಪಾಗಗನ , ಪೊನ್ನಂಪೇಟೆ.
What's Your Reaction?






