ಪೆರುಂಬಾಡಿ ಗೇಟ್ ನಿಂದ ಮಾಕುಟ್ಟ ಗೇಟ್‌ವರೆಗೆ ಪರಿಸರ ಸಂರಕ್ಷಣಾ ಬೃಹತ್ ಜಾಥಾ: ಪರಿಸರ ಸಂರಕ್ಷಿಸಲು ಸಂಕೇತ್ ಪೂವಯ್ಯ ಕರೆ

ವಿರಾಜಪೇಟೆ:ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಕೊಡಗಿನ ಗಡಿಭಾಗವಾದ ಪೆರುಂಬಾಡಿ ಗೇಟ್ ನಿಂದ ಮಾಕುಟ್ಟ ಗೇಟ್‌ವರೆಗೆ ಪರಿಸರ ಸಂರಕ್ಷಣಾ ಬೃಹತ್ ಜಾಥ ಹಮ್ಮಿಕೊಳ್ಳಲಾಗಿತ್ತು. ಕೊಡಗು ಪರಿಸರ ರಕ್ಷಣಾ ಸಮಿತಿಯ ಸಂಚಾಲಕ ಶಶಿ ಅಚ್ಚಪ್ಪ ಅವರ ಮುಂದಾಳತ್ವದಲ್ಲಿ ವಿರಾಜಪೇಟೆ ಭಾಗದ ಸುಮಾರು ಆರು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ರಾಜ್ಯ ವನ್ಯಜೀವಿ ಘಟಕದ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊಡಗಿನ ಗಡಿ ಭಾಗವಾದ ಇಲ್ಲಿ ಸುಮಾರು 20ರಿಂದ 25 ಕಿಲೋ ಮೀಟರ್‌ವರೆಗೆ ಅರಣ್ಯ ಪ್ರದೇಶವಿದ್ದು, ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳ ರಾಜ್ಯದ ಮೀನಿನ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ, ಕೋಳಿ ಅಂಗಡಿಯ ತ್ಯಾಜ್ಯವನ್ನು ಪ್ರಕೃತಿಯನ್ನು ಪೂಜಿಸುವ ಈ ಜಿಲ್ಲೆಯಲ್ಲಿ ಬೇಜವಾಬ್ದಾರಿಯಿಂದ ತಂದು ಸುರಿಯುತ್ತಿದ್ದಾರೆ ಅಲ್ಲದೇ, ಪ್ರವಾಸಿಗರು ವಾಹನಗಳಲ್ಲಿ ತೆರಳುವಾಗ ರಸ್ತೆಬದಿ ಬಿಸಾಡುತ್ತಿದ್ದಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಪರಿಸರ ಕಾಳಜಿ ಉಳ್ಳವರು ಅರಣ್ಯ ಇಲಾಖೆ ಜೊತೆಗೂಡಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು ವಿಶೇಷವಾಗಿ ಬೇಟೋಳಿ ಮತ್ತು ಆರ್ಜಿ ಪಂಚಾಯ್ತಿಯವರು ಈ ಕಾರ್ಯದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ ಸಂಚಾಲಕ ಶಶಿ ಅಚ್ಚಪ್ಪ ಅವರು ಮಾತನಾಡಿ, ಎರಡು ದಿನಗಳಿಂದ ಪರಿಸರ ಜಾಗೃತಿ ಜಾಥವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಪಂಚಾಯಿತಿಗೆ ಒಪ್ಪಿಸಲಾಗುವುದು ಜಿಲ್ಲೆಯ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕೆಂದರು.
ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ಅವರು ಮಾತನಾಡಿ, ಕಳೆದ ಒಂದು ತಿಂಗಳ ಹಿಂದೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದು ಮತ್ತೆ ರಸ್ತೆಯ ಇಕ್ಕೆಲಗಳಲ್ಲಿ ಯಥಾ ಸ್ಥಿತಿಯಲ್ಲಿ ಕಸ ಸಂಗ್ರಹಣೆಯಾಗಿದೆ. ಸ್ವಚ್ಛತಾ ಕಾರ್ಯ ಕೈಗೊಂಡ ನಂತರ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರವಾಸಿಗರು ಕಸ ಹಾಕುವ ಸಂದರ್ಭ ಸಾರ್ವಜನಿಕರು ಫೋಟೋ ತೆಗೆದು ಪಂಚಾಯಿತಿಗೆ ಕಳಿಸಿದಲ್ಲಿ ಕಸ ಎಸೆದವರಿಗೆ ದಂಡ ವಿಧಿಸಲಾಗುವುದೆಂದರು.
ವನ್ಯಜೀವಿ ವಲಯ ಮತ್ತು ರಕ್ಷಿತಾರಣ್ಯ ಬದಿಯ ರಸ್ತೆಯ ಇಕ್ಕೆಲಗಳಲ್ಲಿ ಎರಡು ದಿನಗಳು ನಡೆದ ಬೃಹತ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಕಾವೇರಿ ಕಾಲೇಜ್, ಸರಕಾರಿ ಪದವಿ ಕಾಲೇಜ್, ಸರ್ವೋದಯ ವಿದ್ಯಾ ಸಂಸ್ಥೆ, ಲಿಟಲ್ ಸ್ಕಾಲರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಸ್ಥಳೀಯ ಪಂಚಾಯಿತಿ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರು, ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಲಿಟಲ್ ಸ್ಕಾಲರ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ಸುಜೇಶ್, ಪ್ರಗತಿ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಮಾದಂಡ ತಿಮ್ಮಯ್ಯ , ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಪ್ರದಾನ ಕಾರ್ಯದರ್ಶಿ ಸುನಿತಾ, ಖಜಾಂಚಿ ವಿನೂಪ್ ಕುಮಾರ್, ಬೆಟೋಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಚ್ಚಪಂಡ ದಿನೇಶ್, ಪಿಡಿಓ ಮಣಿ ಮತ್ತು ಸದಸ್ಯರು, ಆರ್ಜಿ ಗ್ರಾಮ ಪಂಚಾಯ್ತಿ ಪಿಡಿಓ ಪ್ರಮೋದ್ ಮತ್ತು ಸದಸ್ಯರು, ವಲಯ ಅರಣ್ಯಾಧಿಕಾರಿಯಾದ ಅರುಣ್ ಮತ್ತಿತರರು ಇದ್ದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ