ಬೇಸಿಗೆ ಶಿಬಿರ ಮಕ್ಕಳ ಸೃಜನ ಹಾಗೂ ಕ್ರಿಯಾಶೀಲತೆಗೆ ಸಹಕಾರಿ: ವಿನಾಯಕ ನರ್ವಡೆ

May 30, 2025 - 18:06
 0  24
ಬೇಸಿಗೆ ಶಿಬಿರ ಮಕ್ಕಳ ಸೃಜನ ಹಾಗೂ ಕ್ರಿಯಾಶೀಲತೆಗೆ ಸಹಕಾರಿ: ವಿನಾಯಕ ನರ್ವಡೆ

ಮಡಿಕೇರಿ(Coorgdaily):ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ವತಿಯಿಂದ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಶುಕ್ರವಾರ ನಡೆಯಿತು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಕಾರ್ಯಕ್ರಮ ಉದ್ಘಾಟಿಸಿ, ಬೇಸಿಗೆ ಶಿಬಿರದ ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತ ಚಟುವಟಿಕೆಗಳಲ್ಲಿನ ಪ್ರದರ್ಶನದಲ್ಲಿ ಮಕ್ಕಳ ಏಕಾಗ್ರತೆ ತುಂಬಾ ಉತ್ತಮವಾಗಿದ್ದು, ತಮ್ಮ ಎಲ್ಲಾ ಕಲಿಕಾ ಚಟುವಟಿಕೆಗಳಲ್ಲಿ ಇದನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪದ್ಮಶ್ರೀ ಪುರಸ್ಕಂತರಾದ ರಾಣಿ ಮಾಚಯ್ಯ ಅವರು ಶಿಬಿರಾರ್ಥಿಗಳ ಯೋಗ, ನೃತ್ಯ ಪ್ರದರ್ಶನವನ್ನು ವೀಕ್ಷಿಸಿ ಮಕ್ಕಳು ವೇದಿಕೆಯನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿಯೂ ಆಸಕ್ತಿಯನು ಅನುಪಾಲನೆ ಮಾಡುವಂತೆ ಸಲಹೆ ಮಾಡಿದರು.  ನಗರ ಪ್ರಾಧಿಕಾರ ಯೋಜನೆಯ ಸದಸ್ಯರಾದ ಮಿನಾಜ್ ಪ್ರವೀಣ್ ಅವರು ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭಾ ಪ್ರದರ್ಶನಕ್ಕೆ ಬೇಸಿಗೆ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿದೇಶಕರಾದ ತಿಪ್ಪಣ್ಣ ಸಿರಸಗಿ ಅವರು ಮಾತನಾಡಿ ಬೇಸಿಗೆ ಶಿಬಿರದಲ್ಲಿ ಮಕ್ಕಳು ಉತ್ತಮವಾಗಿ ಭಾಗವಹಿಸಿ ಶಿಬಿರದಲ್ಲಿ ಹೇಳಿಕೊಟ್ಟಂತಹ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸುಕರಾಗಿ ಪಾಲ್ಗೊಂಡು ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದರು. 

ಜಿಲ್ಲಾ ಬಾಲಭವನದ ವತಿಯಿಂದ ಹಮ್ಮಿಕೊಂಡ ಶಿಬಿರದಲ್ಲಿ ಬಾಲಕರ ಬಾಲಮಂದಿರ, ಬಾಲಕಿಯರ ಬಾಲಮಂದಿರ, ಬಾಲಭವನ, ಮತ್ತು ಇತರೆ ಮಡಿಕೇರಿ ನಗರದ ಮಕ್ಕಳು ಪಾಲ್ಗೊಂಡು ಉತ್ತಮವಾಗಿ ತರಬೇತಿ ಪಡೆದಿರುತ್ತಾರೆ. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳ ಮತ್ತು ಬಾಲಭವನದ ಸಿಬ್ಬಂದಿಗಳ ಪರಿಶ್ರಮದ ಫಲವಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. 

ಶಿಬಿರದಲ್ಲಿ ಮಕ್ಕಳು 15 ದಿನದಲ್ಲಿ ಕಲಿತ ಎಲ್ಲಾ ಚಟುವಟಿಕೆಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. 

ಯೋಗ ಶಿಕ್ಷಕರಾದ ಆಲಿಮ ಮತ್ತು ಸುಗಮ ಸಂಗೀತಕ್ಕೆ ಅರ್ಪಿತ ಅವರು ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕಾರ್ಯಕ್ರಮ ಸಂಯೋಜಕರಾದ ಹರೀಶ್, ನೀತು, ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ಬಾಲಭವನ ಸಹಾಯಕರಾದ ಪೂಜಾ ಅವರು ಸ್ವಾಗತಿಸಿ, ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0