ಯೋಗ ತರಬೇತಿ ನೀಡುವ ಶಾಲೆಗಳಿಗೆ ಜಿಎಸ್‌ಟಿ ಕಡಿಮೆಗೊಳಿಸಲು ಸಂಸದ ಯದುವೀರ್‌ ಮನವಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಂಸದರು

Jun 19, 2025 - 19:00
Jun 19, 2025 - 19:02
 0  21
ಯೋಗ ತರಬೇತಿ ನೀಡುವ ಶಾಲೆಗಳಿಗೆ ಜಿಎಸ್‌ಟಿ ಕಡಿಮೆಗೊಳಿಸಲು ಸಂಸದ ಯದುವೀರ್‌ ಮನವಿ:  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಂಸದರು

ಮೈಸೂರು: ನಮ್ಮ ರಾಜ್ಯ, ದೇಶ ಹಾಗೂ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಯೋಗ ತರಬೇತಿ ನೀಡುವ ಶಾಲೆಗಳಿಗೆ ವಿಧಿಸುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮರು ಪರಿಷ್ಕರಿಸಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.ಈ ಸಂಬಂಧ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ ಸಂಸದರು, ಜಿಎಸ್‌ಟಿ ಕಡಿತಗೊಳಿಸಲು ಮನವಿ ಮಾಡಿದ್ದಾರೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಯೋಗ ಈಗ ಎಲ್ಲೆಡೆ ಹೆಚ್ಚು ಪ್ರಚಲಿತವಾಗಿದೆ. ಯೋಗದ ಬಗ್ಗೆ ಪ್ರಚಾರ ಮತ್ತು ಪೋಷಣೆ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.ನಮ್ಮ ಮೈಸೂರು ವಿಶ್ವದ ಯೋಗ ರಾಜಧಾನಿ ಎಂದೇ ಕರೆಯಲ್ಪಡುತ್ತದೆ. ಯೋಗವು ಕೇವಲ ದೈಹಿಕ ಕಸರತ್ತು ಮಾತ್ರವಲ್ಲ, ಮಾನಸಿಕ, ಆಧ್ಯಾತ್ಮಿಕ ಸ್ಥಿತಿಗತಿಯನ್ನು ಹೆಚ್ಚಿಸುತ್ತಿದೆ. ಯೋಗ ಈಗ ಆರೋಗ್ಯಕರ ಜೀವನಶೈಲಿಯಾಗಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಯೋಗಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಅವರ ನಿರಂತರ ಪ್ರಯತ್ನದಿಂದ ಈಗ ಜೂನ್‌ 21 ಅಂತಾರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತಿದೆ ಎಂದು ಯದುವೀರ್‌ ಸ್ಪಷ್ಟಪಡಿಸಿದ್ದಾರೆ.

ಇಂಥ ಯೋಗವನ್ನು ಹೇಳಿಕೊಡುವ ಸಣ್ಣ ಮತ್ತು ಸಮುದಾಯ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಅಥವಾ ಅತಿ ಕಡಿಮೆ ಶುಲ್ಕದಲ್ಲಿ ಯೋಗ ತರಬೇತಿ ಸೇವೆ ನೀಡುತ್ತಿದೆ. ಈ ಯೋಗ ಶಾಲೆಗಳನ್ನು ಫಿಟ್‌ನೆಸ್‌ ಸೆಂಟರ್‌ ಅಥವಾ ಜಿಮ್‌ಗಳ ಸಾಲಿನಲ್ಲಿ ಸೇರಿಸಿ 18% ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರಿಂದ ಈ ಯೋಗ ಸಂಸ್ಥೆಗಳಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದು ಸಂಸದರು ಮನವಿ ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.ಯೋಗ ದಿನಾಚರಣೆಗೆ ದಿನಗಣನೆ ಆರಂಭವಾಗಿರುವ ಈ ಸಂದರ್ಭದಲ್ಲಿ ಯೋಗ ಶಾಲೆಗಳಿಗೆ ವಿಧಿಸುತ್ತಿರುವ ಜಿಎಸ್‌ಟಿ ಮರು ಪರಿಶೀಲನೆ ಮಾಡಬೇಕು ಎಂದು ಹಣಕಾಸು ಸಚಿವರಿಗೆ ಸಂಸದ ಯದುವೀರ್‌ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಹಣಕಾಸು ಸಚಿವರಿಂದ ಭರವಸೆ:

ಮನವಿ ಪತ್ರವನ್ನು ಸ್ವೀಕರಿಸಿದ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಆದಷ್ಟು ಬೇಗ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ ಎಂದು ಯದುವೀರ್‌ ಮಾಹಿತಿ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0