ಯೋಧರಿಗೆ ರಕ್ತದಾನ ಶಿಬಿರ ಅರ್ಪಣೆ: ಅಕ್ಷಯ ಚಾರಿಟೇಬಲ್ ಟ್ರಸ್ಟ್: ರಕ್ತದಾನ ಮಾಡಿದ 26 ಮಂದಿ

ಗೋಣಿಕೊಪ್ಪ:ಕೊಡಗು ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾರತೀಯ ಯೋಧರ ಆತ್ಮ ಸ್ಥೈರ್ಯಕ್ಕಾಗಿ ಸರಣಿ ರಕ್ತದಾನ ಶಿಬಿರ, ಗೋಣಿಕೊಪ್ಪಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.ಅಕ್ಷಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ಕೆ. ಸೋಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ವನ್ಯಜೀವಿ ಸಂರಕ್ಷಣಾ ಘಟಕದ ಸದಸ್ಯರಾದ ಸಂಕೇತ್ ಪೂವಯ್ಯ ಅವರು ಮಾತನಾಡಿ ರಕ್ತದಾನ ಶಿಬಿರ ಏರ್ಪಡಿಸುವುದು ಅತ್ಯಂತ ಪವಿತ್ರವಾದ ಕೆಲಸ.ನಾವು ನೆಮ್ಮದಿಯಾಗಿ ಜೀವಿಸಲು ಯೋಧರು ಕಾರಣ ಅವರಿಗಾಗಿ ಈ ರಕ್ತದಾನ ಶಿಬಿರವನ್ನು ಅರ್ಪಿಸಲಾಗಿದೆ. ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಮಾತ್ರವಲ್ಲದೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಆಯೋಜನೆಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರು ಮಾತನಾಡಿ, ಕೊಡಗಿನಲ್ಲಿ ತಿಂಗಳಿಗೆ ಕನಿಷ್ಠ ಎಂದರು 5 ಯೂನಿಟ್ ಗಳ ರಕ್ತದ ಅವಶ್ಯಕತೆ ಇರುವುದರಿಂದ ರಕ್ತದಾನ ಮಾಡುವುದು ಅತ್ಯಂತ ಅವಶ್ಯಕ. ಸೂಕ್ತ ಸಂದರ್ಭದಲ್ಲಿ ರಕ್ತ ದೊರಕದೇ ರೋಗಿ ಸಾವನ್ನಪ್ಪುವ ಸಾಧ್ಯತೆ ಇದೆ. ಪ್ರತಿಯೊಬ್ಬರು ರಕ್ತದಾನದ ಮಹತ್ವವನ್ನು ಅರಿತು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಅವರು ಮಾತನಾಡಿ, ಗಡಿಯಲ್ಲಿ ಹೋರಾಡುತ್ತಿರುವ ಸೈನಿಕರಿಗೆ ಸ್ಪೂರ್ತಿಯನ್ನು ನೀಡಲು ಈ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, 18 ವರ್ಷ ಮೇಲ್ಪಟ್ಟು 65 ವಯಸ್ಸಿನವರು ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಬೇಕು. ರಕ್ತದಾನದ ಬಗ್ಗೆ ಇರುವ ಮೂಢನಂಬಿಕೆಗಳನ್ನು ಬದಿಗಿಟ್ಟು ರಕ್ತದಾನ ಮಾಡುವುದರಿಂದ ರೋಗಿಗಳ ಜೀವ ಉಳಿಸಬಹುದು. ರಕ್ತದಾನಿಗಳ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತರಾಗುತ್ತೇವೆ ಎಂದರು.
ಅಕ್ಷಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ ಕೆ ಸೋಮಯ್ಯ ಅವರು ಮಾತನಾಡಿ, ಟ್ರಸ್ಟ್ ವತಿಯಿಂದ ಸೂರು, ಸ್ಪೂರ್ತಿ, ಆಶ್ರಯ, ರಕ್ತದಾನ ಹೀಗೆ ಎಂಟು ವಿಧದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಲಿಜನ್ ಅಧ್ಯಕ್ಷ ಬಿ. ಎನ್ ಪ್ರಕಾಶ್, ಎಂ. ಎನ್ ಉತ್ತಪ್ಪ, ಗೋಣಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಹೆಚ್. ಕೆ ಕುಮಾರ್, ಅಕ್ಷಯ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕುಸುಮಾವತಿ ಹಾಗೂ ಸಿಬ್ಬಂದಿಗಳಾದ ಪೂರ್ಣಿಮಾ, ಸೌಮ್ಯ, ರಕ್ಷಿತಾ, ಹರ್ಷಿತ್, ಚಂದ್ರಶೇಖರ್ ಮತ್ತೀತರರು ಹಾಜರಿದ್ದರು. ರಾಜ್ಯ ವನ್ಯಜೀವಿ ಸಂರಕ್ಷಣಾ ಘಟಕದ ಸದಸ್ಯರಾದ ಸಂಕೇತ್ ಪೂವಯ್ಯ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸರಣಿ ರಕ್ತದಾನ ಶಿಬಿರದಲ್ಲಿ ಸುಮಾರು 26 ಮಂದಿ ರಕ್ತದಾನ ಮಾಡಿದರು.
ವರದಿ:ಚಂಪಾಗಗನ ಪೊನ್ನಂಪೇಟೆ