ಸೋಮವಾರಪೇಟೆ ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ

Jun 19, 2025 - 18:35
 0  44
ಸೋಮವಾರಪೇಟೆ ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ

ಮಡಿಕೇರಿ:-ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರರ ಕಚೇರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಗುರುವಾರ ಭೇಟಿ ನೀಡಿ ಭೂಸುರಕ್ಷತೆ ಮತ್ತು ಕಂದಾಯ ದಾಖಲೆ ಡಿಜಿಟಲೀಕರಣ ಪ್ರಕ್ರಿಯೆ ಸಂಬಂಧ ಮಾಹಿತಿ ಪಡೆದರು. 

ಭೂ ಸುರಕ್ಷತಾ ಯೋಜನೆಯಡಿ ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ವಿತರಿಸುವ ಹಿನ್ನೆಲೆ ಅಗತ್ಯ ಕ್ರಮವಹಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಸರ್ಕಾರ ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆ ಜಾರಿಗೊಳಿಸಿದ್ದು, ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.  ಸಕಾಲ ಯೋಜನೆ, ಪಿಂಚಣಿ ಯೋಜನೆ ಸಂಬಂಧಿಸಿದಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕೃಷ್ಣಮೂರ್ತಿ, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಇತರರು ಇದ್ದರು. 

ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಭೆ: ಸೋಮವಾರಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇದೇ ಸಂದರ್ಭದಲ್ಲಿ ಸಭೆ ನಡೆಸಿದರು. ಈ ಬಾರಿ ಮುಂಗಾರು ಬೇಗ ಆರಂಭವಾಗಿದ್ದು, ಮೇ ಮತ್ತು ಜೂನ್ ತಿಂಗಳಲ್ಲಿಯೇ ಹೆಚ್ಚಿನ ಮಳೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು. 

ಅಂಗನವಾಡಿ, ಶಾಲಾ ಮತ್ತು ಕಾಲೇಜು ಕಟ್ಟಡಗಳ ಸ್ಥಿತಿಗತಿ ಬಗ್ಗೆ ಕೂಡಲೇ ವರದಿ ನೀಡಬೇಕು. ಸುಸ್ಥಿತಿಯಲ್ಲಿರದ ಶಾಲಾ, ಕಾಲೇಜು, ಅಂಗನವಾಡಿ ಕಟ್ಟಡ ಸಂಬಂಧ ಅಂದಾಜುಪಟ್ಟಿ ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. 

ಪ್ರಾಕೃತಿಕ ವಿಕೋಪ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಹವಾಮಾನ ಇಲಾಖೆ ಹೊರಡಿಸುವ ಮಾಹಿತಿ ಹಂಚಿಕೊಳ್ಳಬೇಕು. ಅತೀವೃಷ್ಟಿಯಿಂದ ಮನೆ, ಮತ್ತಿತರ ಹಾನಿ ಸಂಭವಿಸಿದಲ್ಲಿ ಕೂಡಲೇ ಪರಿಹಾರ ವಿತರಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ತಹಶೀಲ್ದಾರರು ಮತ್ತು ತಾ.ಪಂ ಇಒಗಳ ಜೊತೆ ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಅಹವಾಲಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಿದರು.   

ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಜಿ.ಪಂ.ಉಪ ಕಾರ್ಯದರ್ಶಿ ಅಬ್ದುಲ್ ನಬಿ, ತಹಶೀಲ್ದಾರ್ ಕೃಷ್ಣಮೂರ್ತಿ, ತಾ.ಪಂ.ಇಒ ಪರಮೇಶ ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0