ಹೊದ್ದೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿ: ಪ್ರಯಾಣಿಕರು ಪಾರು

ಹೊದ್ದೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿ: ಪ್ರಯಾಣಿಕರು ಪಾರು

ನಾಪೋಕ್ಲು : ಚಾಲಕನ ನಿಯಂತ್ರಣ ತಪ್ಪಿದ ಟೊಯೋಟಾ ಕಾರೊಂದು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ ಪಲ್ಟಿಯಾದ ಘಟನೆ ನಾಪೋಕ್ಲು -ಮೂರ್ನಾಡು ಮುಖ್ಯರಸ್ತೆಯ ಹೊದ್ದೂರು ಗ್ರಾಮದ ರಸ್ತೆ ತಿರುವಿನಲ್ಲಿ ಗುರುವಾರ ಮುಂಜಾನೆ ನಡೆದಿದೆ.

 ಕೇರಳದ ಕಣ್ಣೂರಿನಿಂದ ವಿರಾಜಪೇಟೆ -ಮೂರ್ನಾಡು ಮಾರ್ಗವಾಗಿ ನಾಪೋಕ್ಲು ಬಳಿಯ ಎಮ್ಮೆಮಾಡು ದರ್ಗಾಕ್ಕೆ ಟೊಯೋಟಾ ಇಟಿಯೋಸ್ ಕಾರಿನಲ್ಲಿ ಆರು ಮಂದಿ ಪ್ರಯಾಣಿಸುತ್ತಿರುವಸಂದರ್ಭ ಮೂರ್ನಾಡು -ನಾಪೋಕ್ಲು ಮುಖ್ಯರಸ್ತೆಯ ಹೊದ್ದೂರು ಗ್ರಾಮದ ಭಗವತಿ ಕಾಲೋನಿ ಸಮೀಪದ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ಕಾರು ರಸ್ತೆಯಲ್ಲಿ ಪಲ್ಟಿಯಾಗಿದೆ. ಅಪಘಾತದಿಂದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಉಳಿದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು ವಿದ್ಯುತ್ ಕಂಬಕ್ಕೂ ಹಾನಿ ಉಂಟಾಗಿದೆ.ಶಬ್ದಕೇಳಿ ರಸ್ತೆಗೆ ಓಡಿ ಬಂದ ಭಗವತಿ ಕಾಲೋನಿ ನಿವಾಸಿಗಳು ರಸ್ತೆಯಲ್ಲಿ ಪಲ್ಟಿಯಾದ ಕಾರಿನೊಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿ ರಸ್ತೆಯಿಂದ ಕಾರನ್ನು ತೆರೆವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

ವರದಿ:ಝಕರಿಯ ನಾಪೋಕ್ಲು