ನಕಲಿ ಗೋಲ್ಡ್‌ ಲೋನ್‌ ಗಳ ಮೂಲಕ ₹3.11 ಕೋಟಿ ವಂಚನೆ | 41 ಖಾತೆಗಳು ಫ್ರೀಝ್; ಬ್ಯಾಂಕ್‌ ಮ್ಯಾನೇಜರ್ ಪರಾರಿ

Dec 29, 2025 - 22:51
 0  1.3k
ನಕಲಿ ಗೋಲ್ಡ್‌ ಲೋನ್‌ ಗಳ ಮೂಲಕ ₹3.11 ಕೋಟಿ ವಂಚನೆ | 41 ಖಾತೆಗಳು ಫ್ರೀಝ್; ಬ್ಯಾಂಕ್‌ ಮ್ಯಾನೇಜರ್ ಪರಾರಿ
ಕೆನರಾ ಬ್ಯಾಂಕ್

ಬೆಂಗಳೂರು: ಮಲ್ಲೇಶ್ವರಂನ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಕಲಿ ಗೋಲ್ಡ್‌ ಲೋನ್‌ಗಳನ್ನು ಸೃಷ್ಟಿಸಿ ₹3.11 ಕೋಟಿ ರೂ. ವಂಚನೆ ನಡೆಸಿರುವ ಆರೋಪ ಬೆಳಕಿಗೆ ಬಂದಿದೆ. ಶಾಖೆಯ ಹಿರಿಯ ವ್ಯವಸ್ಥಾಪಕ ಎನ್‌. ರಘು ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಅವರು ಪರಾರಿಯಾಗಿದ್ದಾರೆ.

ಪೊಲೀಸ್ ಹಾಗೂ ಬ್ಯಾಂಕ್ ಮೂಲಗಳ ಪ್ರಕಾರ, 2025ರ ಅಕ್ಟೋಬರ್ 4ರಿಂದ ಡಿಸೆಂಬರ್ 9ರ ಅವಧಿಯಲ್ಲಿ ಯಾವುದೇ ಚಿನ್ನವನ್ನು ಅಡಮಾನವಾಗಿಸದೇ 41 ಗ್ರಾಹಕರ ಹೆಸರಿನಲ್ಲಿ ಗೋಲ್ಡ್‌ ಲೋನ್‌ಗಳನ್ನು ತೆರೆಯಲಾಗಿದೆ. ಈ ಮೂಲಕ ಕೋಟ್ಯಂತರ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಯೋವೃದ್ಧರು, ಪಿಂಚಣಿದಾರರು, ಅರ್ಚಕರು ಹಾಗೂ ಹೋಲ್‌ಸೇಲ್‌ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು, ಬ್ಯಾಂಕ್ ಕೆಲಸಕ್ಕೆ ಅಗತ್ಯವೆಂದು ಸುಳ್ಳು ಹೇಳಿ ಒಟಿಪಿ ಮತ್ತು ಚೆಕ್‌ ಪಡೆದು ನಂಬಿಕೆ ದ್ರೋಹ ಮಾಡಲಾಗಿದೆ ಎಂದು ದೂರಲಾಗಿದೆ. ಗ್ರಾಹಕರಿಗೆ ತಿಳಿಯದೇ ಅವರ ಖಾತೆಗಳಲ್ಲಿ ಲೋನ್‌ ತೆರೆಯಿಸಿ ಹಣವನ್ನು ಡ್ರಾ ಮಾಡಿ ಆರೋಪಿಯು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂಬ ಆರೋಪವೂ ಇದೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ಬ್ಯಾಂಕ್ 41 ಖಾತೆಗಳನ್ನು ಫ್ರೀಜ್ ಮಾಡಿದ್ದು, ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಮಲ್ಲೇಶ್ವರಂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಈ ಘಟನೆಯ ಹಿನ್ನೆಲೆ, ಗ್ರಾಹಕರು ತಮ್ಮ ಖಾತೆಗಳಲ್ಲಿ ಯಾವುದೇ ಅನುಮಾನಾಸ್ಪದ ಲೋನ್‌ ಅಥವಾ ವ್ಯವಹಾರಗಳಿರುವುದೇ ಎಂಬುದನ್ನು ತಕ್ಷಣ ಪರಿಶೀಲಿಸಿಕೊಳ್ಳುವಂತೆ ಬ್ಯಾಂಕ್ ಹಾಗೂ ಪೊಲೀಸರು ಸಲಹೆ ನೀಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 2
Sad Sad 2
Wow Wow 0