ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ: ಎಂಟು ಮಂದಿ ಪತ್ರಕರ್ತರಿಗೆ ಪ್ರಶಸ್ತಿ
ಕುಶಾಲನಗರ:ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 8 ಮಂದಿ ಪತ್ರಕರ್ತ ಸದಸ್ಯರು ಅತ್ಯುತ್ತಮ ವರದಿಗಳಿಗೆ ನೀಡಲಾಗುವ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.
ಪತ್ರಕರ್ತೆ ವನಿತಾ ಚಂದ್ರಮೋಹನ್ ಅವರ ತಾಯಿ ಅಯಿನಮಂಡ ಲೀಲಾವತಿ ಗಣಪತಿ ಅವರು ತಮ್ಮ ಪತಿ ದಿ. ಅಯಿನಮಂಡ ಗಣಪತಿ ಅವರ ಸ್ಮರಣಾರ್ಥ ಅತ್ಯುತ್ತಮವಾದ ಮಾನವೀಯ ವರದಿಗೆ ಶಕ್ತಿ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ ಅವರ 'ಜಿಲ್ಲೆಯಲ್ಲಿ ಮುಚ್ಚುವ ಹಂತಕ್ಕೆ ತಲುಪಿರುವ ರೇಷ್ಮೆ ಇಲಾಖೆ' ಎಂಬ ವರದಿ ಆಯ್ಕೆಯಾಗಿದೆ.
ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ, ತಾಯಿ ಎಂ. ನಾರಾಯಣ ಮತ್ತು ಎನ್. ಪದ್ಮಾವತಿ ದಂಪತಿಗಳ ಸ್ಮರಣಾರ್ಥ ಅತ್ಯುತ್ತಮ ತನಿಖಾ ವರದಿಗೆ ಚಂದ್ರಮೋಹನ್ ಅವರ ಶಕ್ತಿಯಲ್ಲಿ ಪ್ರಕಟಗೊಂಡ 'ಹಾರಂಗಿ ಅಣೆಕಟ್ಟೆ ಅಂಚಿನಲ್ಲಿ ಗಣಿಗಾರಿಕೆ ತಂದಿರುವ ಆತಂಕ' ತನಿಖಾ ವರದಿ ಆಯ್ಕೆಯಾಗಿದೆ.
ಮಾಜಿ ಸಚಿವ ಎಂ. ಪಿ. ಅಪ್ಪಚ್ಚು ರಂಜನ್ ಅವರು ಸ್ಥಾಪಿಸಿದ ಅತ್ಯುತ್ತಮ ರಾಜಕೀಯ ವರದಿಗೆ ಪ್ರಜಾ ಸತ್ಯ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗಾರ ಜಯಪ್ರಕಾಶ್ ಅವರ ' ಬಿಜೆಪಿಯ ಅಸಮಾಧಾನವೇ ಕಾಂಗ್ರೆಸ್ಸಿಗೆ ವರದಾನ' ಎಂಬ ವರದಿಗೆ ಲಭಿಸಿದೆ.
ಕುಶಾಲನಗರದ ಶಾರದಾ ಪತ್ತಿನ ಸಹಕಾರ ಸಂಘದ ವತಿಯಿಂದ ನೀಡಲಾಗುವ ಅತ್ಯುತ್ತಮ ಸಹಕಾರ ಸಂಘ ಬಗ್ಗೆ ವರದಿಗೆ ಆಂದೋಲನ ಪತ್ರಿಕೆಯಲ್ಲಿ ಕೆ.ಬಿ ಶಂಷುದ್ದೀನ್ ಅವರ 'ಜನವರಿ 18ಕ್ಕೆ ಐಪಿಎಂಎಸ್ ಚುನಾವಣೆ' ವರದಿ ಆಯ್ಕೆಯಾಗಿದೆ.
ಪತ್ರಕರ್ತ ಟಿ. ಆರ್. ಪ್ರಭುದೇವ್ ಅವರ ತಂದೆ ದಿ. ಎನ್. ರಾಮಕೃಷ್ಣ ಮತ್ತು ತಾಯಿ ದಿ. ಕೆ. ಎಂ. ಸರಸಮ್ಮ ಅವರ ಸ್ಮರಣಾರ್ಥ ಸ್ಥಾಪಿಸಿರುವ ನೊಂದವರ ಪರ ವರದಿಗೆ ಟಿ.ಆರ್.ಪ್ರಭುದೇವ್ ಅವರ ಜನಮಿತ್ರದಲ್ಲಿ ಪ್ರಕಟಗೊಂಡ 'ಪ್ಲಾಸ್ಟಿಕ್ ಹೊದಿಕೆಯ ಗುಡಿಸಲೇ ಇವರಿಗೆ ಅರಮನೆ' ವರದಿ ಆಯ್ಕೆಯಾಗಿದೆ.
ಪತ್ರಕರ್ತ ಕೆ. ಬಿ. ಶಂಷುದ್ದಿನ್ ಅವರು ತಮ್ಮ ತಾಯಿ ದಿ.ಕೆ.ಕೆ.ಖತೀಜ ಅವರ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರ ವಿನೋದ್ ಅವರ ಮೂಲಕ ಪ್ರಕಟಗೊಂಡ 'ಕುಶಾಲನಗರಕ್ಕಿಲ್ಲ ಕ್ರೀಡಾಂಗಣ' ಸುದ್ದಿ ಆಯ್ಕೆ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಳಲಗದ್ದೆ ನಳಂದ ಆಯುರ್ವೇದ ನ್ಯಾಸ ದ ಖ್ಯಾತ ಪಾರಂಪರಿಕ ವೈದ್ಯೆ ಸುಮನ ಮಳಲಗದ್ದೆ ಅವರು ಸ್ಥಾಪಿಸಿದ ಪಾರಂಪರಿಕ ನಾಟಿ ವೈದ್ಯ ವರದಿ ಪ್ರಶಸ್ತಿಗೆ ಶಕ್ತಿಯಲ್ಲಿ ಪ್ರಕಟಗೊಂಡ ಚೈತನ್ಯ ಚಂದ್ರಮೋಹನ್ ಅವರ ವಿಶೇಷ ಲೇಖನ 'ಮಕ್ಕಳ ಪಾಲಿನ ಸಂಜೀವಿನಿ ಲೀಲಾವತಿ ಗಣಪತಿ ' ವಿಶೇಷ ವರದಿಗೆ ಲಭಿಸಿದೆ,
ಮತ್ತು ಪತ್ರಕರ್ತ ಕುಡೆಕಲ್ ಗಣೇಶ್ ಅವರ ತಂದೆ ಕುಡೆಕಲ್ ಕೃಷ್ಣಪ್ಪ ಹಾಗೂ ತಾಯಿ ಯಶೋಧ ಅವರ ಜ್ಞಾಪಕಾರ್ಥ ಸ್ಥಾಪಿತ ದೃಶ್ಯ ವಾಹಿನಿಯ ಸಾಮಾಜಿಕ ಕಳಕಳಿಯ ವರದಿಗೆ ಚಿತ್ತಾರ ವಾಹಿನಿಯ ವರದಿಗಾರ ಕೆ.ಜೆ. ಶಿವರಾಜ್ ಅವರ 'ಇಂದಿರಾ ಬಡಾವಣೆಯ ರಸ್ತೆ ಅವ್ಯವಸ್ಥೆ' ಮಾಧ್ಯಮ ವರದಿಗೆ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಲಭಿಸಿದೆ
ಎಂದು ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜೂನ್ 19 ರಂದು ಕುಶಾಲನಗರದಲ್ಲಿ ನಡೆಯುವ ತಾಲೂಕು ಸಂಘದ ವಾರ್ಷಿಕ ಮಹಾಸಭೆ ಮತ್ತು ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.