ವಿರಾಜಪೇಟೆಯ ತೋರ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ; ಕುಗ್ರಾಮಗಳಿಗೂ ಅಕಾಡೆಮಿ ಕಾರ್ಯಕ್ರಮ ತಲುಪುತ್ತಿರುವುದು ಅರೆಭಾಷೆ ಬೆಳವಣಿಗೆಗೆ ಸಹಕಾರಿ ಎ.ಎಸ್.ಪೊನ್ನಣ್ಣ

ವಿರಾಜಪೇಟೆಯ ತೋರ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ; ಕುಗ್ರಾಮಗಳಿಗೂ ಅಕಾಡೆಮಿ ಕಾರ್ಯಕ್ರಮ ತಲುಪುತ್ತಿರುವುದು ಅರೆಭಾಷೆ ಬೆಳವಣಿಗೆಗೆ ಸಹಕಾರಿ ಎ.ಎಸ್.ಪೊನ್ನಣ್ಣ

ಮಡಿಕೇರಿ:-ಮದೆನಾಡು ಬಳಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ 6 ಎಕರೆ ಭೂಮಿ ಕಾಯ್ದಿರಿಸಿದೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ನಿಗದಿ ಮಾಡಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.  

      ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಅರೆಭಾಷೆ, ಸಂಸ್ಕøತಿ ಮತ್ತು ಅಭಿವೃದ್ಧಿ ಸಂಘ ಇವರ ಸಹಕಾರದಲ್ಲಿ ತೋರ ಸಮುದಾಯ ಭವನದ ಆವರಣದಲ್ಲಿ ಬುಧವಾರ ನಡೆದ ಅರೆಭಾಷೆ ಗಡಿನಾಡ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

      ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ 6 ಎಕರೆ ಭೂಮಿ ನೀಡಿದ್ದಾರೆ. ಹಾಗೆಯೇ ಭಾಗಮಂಡಲ ಗೌಡ ಸಮಾಜ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ಪ್ರಕಟಿಸಿದ್ದರು. ಅದರಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ನುಡಿದಂತೆ ನಡೆದಿದ್ದು, ಸರ್ಕಾರ ಎಲ್ಲಾ ಸಮಾಜಗಳ ಶ್ರೇಯೋಭಿವೃದ್ಧಿಗೆ ಬದ್ಧವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು.  

      ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ತೋರದಂತಹ ಗಡಿ ಗ್ರಾಮದಲ್ಲಿಯೂ ಸಹ ಗಡಿನಾಡ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವೇ ಸರಿ. ಇದರಿಂದ ಅರೆಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಉಳಿಸಿ, ಬೆಳೆಸಲು ಸಹಕಾರಿಯಾಗಿದೆ. ಹಾಗೆಯೇ ಅಕಾಡೆಮಿ ಕಾರ್ಯಕ್ರಮಗಳು ಕುಗ್ರಾಮಗಳಿಗೂ ಸಹ ತಲುಪುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.

     ಗಡಿನಾಡ ಉತ್ಸವಗಳು, ಗ್ರಾಮೋತ್ಸವ ಕಾರ್ಯಕ್ರಮಗಳು ಹಳ್ಳಿಗಳಿಗೂ ತಲುಪಿದಾಗ ಅರೆಭಾಷೆ, ಸಂಸ್ಕøತಿ, ಸಾಹಿತ್ಯ, ಪರಂಪರೆ ಮತ್ತಷ್ಟು ಗಟ್ಟಿಗೊಳಿಸಲು ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಂದೆಡೆ ಸೇರಲು ಕಾರ್ಯಕ್ರಮ ಅನುಕೂಲವಾಗಿದೆ ಎಂದು ಎ.ಎಸ್.ಪೊನ್ನಣ್ಣ ನುಡಿದರು.  

     ಕೊಡಗು ಜಿಲ್ಲೆಯಲ್ಲಿ ಸಣ್ಣ ಸಣ್ಣ ಸಮಾಜಗಳು ವಾಸಿಸುತ್ತಿದ್ದು, ತಮ್ಮದೇ ಆದ ಭಾಷೆ, ಸಂಸ್ಕøತಿ, ಕಲೆ, ಸಂಪ್ರದಾಯಗಳನ್ನು ಒಳಗೊಂಡಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕು. ಆ ನಿಟ್ಟಿನಲ್ಲಿ ಅಕಾಡೆಮಿಗಳು ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು. 

      ಅರೆಭಾಷೆ ಸಂಸ್ಕೃತಿ, ಸಾಹಿತ್ಯವನ್ನು ಜನ ಸಮುದಾಯದ ಅಂತರಾಳಕ್ಕೆ ತಲುಪಿಸಬೇಕು. ಇಲ್ಲಿನ ಆಹಾರ ಪದ್ಧತಿ, ಉಡುಗೆ, ತೊಡುಗೆ, ಮದುವೆ ಪದ್ಧತಿಗಳು ವಿಭಿನ್ನ ಹಾಗೂ ವೈಶಿಷ್ಟ್ಯತೆ ಹೊಂದಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹ ಸಹೋದರತೆ, ಸಹಬಾಳ್ವೆ, ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಮುನ್ನಡೆಯಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು. 

       ಯಾವುದೇ ಒಂದು ಭಾಷೆಗೆ ಗಡಿ ಇಲ್ಲ. ಭಾಷೆಯನ್ನು ಮತ್ತಷ್ಟು ವಿಸ್ತರಿಸಿ ಬೆಳೆಸುವಲ್ಲಿ ಶ್ರಮಿಸಬೇಕು. ಆ ನಿಟ್ಟಿನಲ್ಲಿ ಕುಟುಂಬದಿಂದಲೇ ಭಾಷೆ ಬೆಳವಣಿಗೆಗೆ ಪ್ರಯತ್ನಗಳು ನಡೆಯಬೇಕು. ಭಾಷೆ ಉಳಿದರೆ ಜನಾಂಗ ಉಳಿಯುತ್ತದೆ ಎಂಬುದನ್ನು ಮರೆಯಬಾರದು ಎಂದರು. 

       ಅನಾದಿಕಾಲದಿಂದಲೂ ಪೂರ್ವಜರು ಉಳಿಸಿಕೊಂಡಿರುವ ಅರೆಭಾಷೆಯನ್ನು ಉಳಿಸಬೇಕು. ಇತರೆ ಭಾಷೆಯನ್ನು ಗೌರವಿಸಬೇಕು ಮತ್ತು ಪ್ರೀತಿಸಬೇಕು. ಎಲ್ಲರಲ್ಲೂ ಸಹ ಸಹೋದರತೆ ಇರಬೇಕು ಎಂದರು.  

       ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಟಿ.ಎಂ.ಧರ್ಮಜ ಉತ್ತಪ್ಪ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹಲವು ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಅಕಾಡೆಮಿ ಕಾರ್ಯ ಚಟುವಟಿಕೆಗಳನ್ನು ತಿಳಿಸಲು ಸಹಕಾರಿಯಾಗಿದೆ. ಇದರಿಂದ ಸಾಹಿತ್ಯ ಬೆಳವಣಿಗೆಗೆ ಅನುಕೂಲವಾಗಿದೆ ಎಂದು ಹೇಳಿದರು. 

       ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ ಅಕಾಡೆಮಿ ವತಿಯಿಂದ ಸುಳ್ಯ ತಾಲ್ಲೂಕಿನ ಬಂದ್ಯಡ್ಕ, ಮಂಡೆಕೋಲು, ಮಡಿಕೇರಿ ತಾಲ್ಲೂಕಿನ ಚೆಯ್ಯಂಡಾಣಿ, ಸೇರಿದಂತೆ ವಿವಿಧ ಕಡೆಗಳಲ್ಲಿ ಗಡಿನಾಡ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ವಿವಿಧ ಕಡೆಗಳಲ್ಲಿ ಗ್ರಾಮೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಕಾಡೆಮಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸಲು ಶ್ರಮಿಸಲಾಗಿದೆ ಎಂದರು. 

      ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಜಾನಪದ ಕಲೆಗಳು ಮತ್ತಿತರ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಲಾಗುತ್ತದೆ. ಅರೆಭಾಷೆ ಸಾಂಸ್ಕøತಿಕ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಹಾಗೆಯೇ ಸಾಹಿತ್ಯ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ಅರೆಭಾಷೆ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ ಎಂದು ಸದಾನಂದ ಮಾವಜಿ ಅವರು ವಿವರಿಸಿದರು.

      ಅರೆಭಾಷೆ ಜಾತಿಯನ್ನು ಮೀರಿ ಬೆಳೆದಿದ್ದು, ರಾಜ್ಯ ಭಾಷೆಯಾಗಿದೆ. 2025 ರಲ್ಲಿ ಗಡಿನಾಡ ಉತ್ಸವ ಆರಂಭಿಸಿ ಹಲವು ಸಾಂಸ್ಕøತಿಕ ಶಿಬಿರ ಏರ್ಪಡಿಸಲಾಗಿದೆ ಎಂದರು. 

      ಅರೆಭಾಷೆಯನ್ನು ಎಲ್ಲೆಡೆ ಫಸರಿಸುವಲ್ಲಿ ಕತೆ, ಕವನ, ಸಣ್ಣ ಕತೆಗಳು, ಬರಹ, ಪ್ರೋತ್ಸಾಹಿಸುವಲ್ಲಿ ತ್ರೈಮಾಸಿಕ ‘ಹಿಂಗಾರ’ವನ್ನು ಪ್ರಕಟಿಸಲಾಗುತ್ತಿದ್ದು, ಈ ಅವಕಾಶವನ್ನು ಅರೆಭಾಷಿಕರು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಕೋರಿದರು. 

      ಕೆದಮುಳ್ಳೂರು ಗ್ರಾಮದ ಅರೆಭಾಷೆ ಸಂಸ್ಕೃತಿ ಮತ್ತು ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಪೊಕ್ಕುಳಂಡ್ರ ಎಸ್.ದಿನೇಶ್ ಅವರು ಮಾತನಾಡಿ ತೋರ ಗ್ರಾಮದ ಸುತ್ತಮುತ್ತ ಅರೆಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದು, ಅರೆಭಾಷಿಕರ ಭವನ ನಿರ್ಮಾಣಕ್ಕೆ ಜಾಗ ಒದಗಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. 

      ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷರಾದ ಮುಕ್ಕಾಟಿ ವಾಸು ಗಣಪತಿ ಅವರು ಮಾತನಾಡಿ ಅಕಾಡೆಮಿ ಆರಂಭದ ನಂತರ ಅರೆಭಾಷೆ ಬೆಳವಣಿಗೆಗೆ ಹೆಚ್ಚಿನ ಸಹಕಾರ ಆಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಬೇಕು ಎಂದು ಸಲಹೆ ಮಾಡಿದರು. 

      ಮಡಿಕೇರಿ ಕೊಡಗು ಗೌಡ ಸಮಾಜದ ನಿರ್ದೇಶಕರಾದ ತೋಟಂಬೈಲು ಕುಮಾರ ಅವರು ಮಾತನಾಡಿ ಅರೆಭಾಷಿಕರಲ್ಲಿ ಮದುವೆ ಪದ್ಧತಿಯು ವಿಶಿಷ್ಟವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಆದರೆ ಮದುವೆ ಪದ್ಧತಿಯನ್ನು ಹಿಂದಿನಂತೆ ನಡೆಸಿಕೊಂಡು ಹೋಗುವಂತಾಗಬೇಕು ಎಂದು ಸಲಹೆ ಮಾಡಿದರು. 

      ಸದಸ್ಯ ಸಂಚಾಲಕರಾದ ಸೂದನ ಎಸ್.ಈರಪ್ಪ ಅವರು ಮಾತನಾಡಿ ತೋರದಂತಹ ಕುಗ್ರಾಮದಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಹಲವು ತಿಂಗಳಿನಿಂದ ಯೋಚಿಸಿದ್ದೆ. ಆ ನಿಟ್ಟಿನಲ್ಲಿ ಇಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರೆಭಾಷೆ ಸಂಸ್ಕೃತಿ, ಕಲೆಗಳನ್ನು ಕುಗ್ರಾಮಗಳಿಗೂ ತಲುಪಿಸುವಲ್ಲಿ ಅಕಾಡೆಮಿ ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಶಾಸಕರ ಸಹಕಾರ ಹೆಚ್ಚಿನದ್ದಾಗಿದೆ ಎಂದರು.   

      ಸದಸ್ಯ ಸಂಚಾಲಕರಾದ ಮೋಹನ್ ಪೊನ್ನಚನ ಅವರು ಅಕಾಡೆಮಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕೆದಮುಳ್ಳೂರು ಗ್ರಾಮದ ಜಾನಪದ ವಿಭಾಗದ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಕುಡಿಯರ ಬಿ.ಅಮ್ಮುಣಿ, ಹಿರಿಯರಾದ ಪೊಕ್ಕುಳಂಡ್ರ ಕೆ.ಪಾಪಯ್ಯ, ತೋಟಂಬೈಲು ರಾಜು(ಪೆಮ್ಮಯ್ಯ) ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.  

      ನರಿಯಂದಡ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಬೊಳಿಯಂಡ್ರ ಹರಿಪ್ರಸಾದ್, ಅಕಾಡೆಮಿ ಸದಸ್ಯರಾದ ಪೂಳಕಂಡ ಸಂದೀಪ್ ಎಂ., ತೇಜಕುಮಾರ್ ಕುಡೆಕಲ್ಲು, ಡಾ.ಎನ್.ಎ.ಜ್ಞಾನೇಶ್, ಲತಾ ಪ್ರಸಾದ್ ಕುದ್ಪಾಜೆ, ಕುದುಪಜೆ ಕೆ.ಪ್ರಕಾಶ್ ಇತರರು ಇದ್ದರು. 

      ಉಳುವಾರನ ರೋಷನ್, ಕಲ್ಲುಮುಟ್ಲು ಜಸ್ಮಿ ಮತ್ತು ಚೈತ್ರ ಅವರು ನಿರೂಪಿಸಿದರು. ಬೈಮನ ಪ್ರೇಮ ಪ್ರಾರ್ಥಿಸಿದರು. ಸೂದನ ಈರಪ್ಪ ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.