ವಿಚ್ಛೇದಿತ ಮಹಿಳೆಗೆ ಬಾಳು ಕೊಡುತ್ತೇನೆಂದು ನಂಬಿಸಿ ₹36 ಲಕ್ಷ ವಂಚನೆ: ಮಗು ಕೊಟ್ಟು ಪರಾರಿ

Jan 11, 2026 - 00:30
 0  1.5k
ವಿಚ್ಛೇದಿತ ಮಹಿಳೆಗೆ ಬಾಳು ಕೊಡುತ್ತೇನೆಂದು ನಂಬಿಸಿ ₹36 ಲಕ್ಷ ವಂಚನೆ:  ಮಗು ಕೊಟ್ಟು ಪರಾರಿ
Photo credit: TV09 (ಫೋಟೋ:ಸಂತ್ರಸ್ತೆ ಹಾಗೂ ಆರೋಪಿ ಮೋಹನ್ ರಾಜ್)

ಬೆಂಗಳೂರು, ಜ. 10: ವಿಚ್ಛೇದಿತ ಮಹಿಳೆಗೆ ಮದುವೆಯಾಗಿಸಿ ಹೊಸ ಜೀವನ ನೀಡುವುದಾಗಿ ನಂಬಿಸಿ, ಆಕೆಯೊಂದಿಗೆ ಸಂಸಾರ ನಡೆಸಿ ಮಗು ಜನಿಸಿದ ಬಳಿಕ ಚಿನ್ನಾಭರಣ ಸೇರಿ ಸುಮಾರು ₹36 ಲಕ್ಷ ರೂಪಾಯಿ ಪಡೆದು ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಬನಶಂಕರಿ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಮಹಿಳೆಯ ದೂರಿನ ಮೇರೆಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಹಾಗೂ ಕಿರುಕುಳದ ಆರೋಪಗಳು ಕೇಳಿಬಂದಿವೆ. ಸಂತ್ರಸ್ತೆ ಹೇಳುವಂತೆ, ಕಳೆದ ಹತ್ತು ವರ್ಷಗಳಿಂದ ಪರಿಚಯವಿದ್ದ ಮೋಹನ್ ರಾಜ್ 2022ರಲ್ಲಿ ತನ್ನನ್ನು ಮದುವೆಯಾಗಿದ್ದ. 2023ರ ಫೆಬ್ರವರಿಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ಆದರೆ 2025ರಲ್ಲಿ ಆರೋಪಿ ಏಕಾಏಕಿ ಮನೆ ಬಿಟ್ಟು ತೆರಳಿದ್ದು, ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ.

ಮದುವೆಯ ಬಳಿಕ ಹೊಸ ಮನೆ ಕಟ್ಟೋಣ, ಹೊಸ ಜೀವನ ಆರಂಭಿಸೋಣ ಎಂದು ನಂಬಿಸಿ ಹಣ ಹಾಗೂ ಚಿನ್ನಾಭರಣ ಪಡೆದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಚಿನ್ನ ಅಡವಿಟ್ಟು ಹಾಗೂ ಸಾಲ ಪಡೆದು ಒಟ್ಟು ₹36 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಹಣ ಹಿಂತಿರುಗಿಸುವಂತೆ ಕೇಳಿದಾಗ, ತನ್ನನ್ನು ಗುರುತಿಸುವುದನ್ನೇ ನಿರಾಕರಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ನ್ಯಾಯಕ್ಕಾಗಿ ಆರೋಪಿಯ ಮನೆ ಬಳಿ ತೆರಳಿದ ವೇಳೆ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪವನ್ನೂ ಮಹಿಳೆ ಮಾಡಿದ್ದಾರೆ. ಈವರೆಗೆ ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಸ್ಪಂದನೆ ಸಿಗಲಿಲ್ಲ. ಮತ್ತೊಮ್ಮೆ ದೂರು ನೀಡಿದರೆ ಜೈಲಿಗೆ ಹಾಕುವುದಾಗಿ ಪೊಲೀಸರು ಬೆದರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಬಳಿಕ ಮತ್ತೊಮ್ಮೆ ಸಲ್ಲಿಸಿದ ದೂರಿನ ಆಧಾರದಲ್ಲಿ ಇದೀಗ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತೆ 2021ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದು, ಆ ವಿಚಾರ ತಿಳಿದಿದ್ದರೂ ಆರೋಪಿ ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಮೊದಲ ಪತಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ವಿಚ್ಛೇದನ ಪಡೆದಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ, ಆರೋಪಿ ಹಲವು ಯುವತಿಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಮದುವೆಗೆ ಮೊದಲು ಹಾಗೂ ನಂತರವೂ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಗಂಭೀರ ಆರೋಪವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನ್ನ ಹೆಣ್ಣು ಮಗು ಹಾಗೂ ಮೊದಲ ಪತಿಯ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಪ್ರಕರಣದ ಕುರಿತು ಬನಶಂಕರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 0
Sad Sad 3
Wow Wow 0