KSRTC ಎಸಿ ಸ್ಲೀಪರ್ ಬಸ್‌ನಲ್ಲಿ ₹55 ಲಕ್ಷ ಕಳವು ಪ್ರಕರಣ | ಮಧ್ಯಪ್ರದೇಶ ಮೂಲದ ಆರೋಪಿ ಬಂಧನ; ಹಣ ವಶ

Dec 25, 2025 - 23:41
 0  307
KSRTC ಎಸಿ ಸ್ಲೀಪರ್ ಬಸ್‌ನಲ್ಲಿ ₹55 ಲಕ್ಷ ಕಳವು ಪ್ರಕರಣ | ಮಧ್ಯಪ್ರದೇಶ ಮೂಲದ ಆರೋಪಿ ಬಂಧನ; ಹಣ ವಶ
Photo credit: TV09 (ಬಂಧಿತ ಆರೋಪಿ)

ಚಿಕ್ಕಬಳ್ಳಾಪುರ, ಡಿ.25: ಊಟ ವಿರಾಮದ ವೇಳೆ ಬೆಂಗಳೂರು–ಹೈದರಾಬಾದ್ ಮಾರ್ಗದ KSRTC ಎಸಿ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಕನೊಬ್ಬರ ₹55 ಲಕ್ಷ ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಮಧ್ಯಪ್ರದೇಶ ಮೂಲದ ಓರ್ವ ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಅಸ್ಲಂ ಖಾನ್ ಎಂದು ಗುರುತಿಸಲಾಗಿದೆ. ಈತನೊಂದಿಗೆ ಕೃತ್ಯ ಎಸಗಿದ್ದ ಮನೀರ್ ಖಾನ್, ಅಭ್ಯಾಖಾನ್ ಹಾಗೂ ಶೇರು ಎಂಬ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸ್ ತನಿಖೆಯಲ್ಲಿ, ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಹಣ, ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುವುದೇ ಈ ಗ್ಯಾಂಗ್‌ ನ ನಿಯಮಿತ ಕಾಯಕವಾಗಿತ್ತು ಎಂಬುದು ಬಹಿರಂಗವಾಗಿದೆ. ಕೃತ್ಯಕ್ಕೆ ಅನುಕೂಲವಾಗುವಂತೆ ಆರೋಪಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಬೀಚಗಾನಹಳ್ಳಿ ಕ್ರಾಸ್ ಸಮೀಪ ಬಾಡಿಗೆ ಕೊಠಡಿಯನ್ನು ಪಡೆದುಕೊಂಡಿದ್ದು, ಕಳುವಾದ ಹಣವನ್ನು ಅಲ್ಲಿಯೇ ಇಟ್ಟು ನಂತರ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆ ವಿವರ:

ಡಿಸೆಂಬರ್ 8ರಂದು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ KSRTC ಎಸಿ ಸ್ಲೀಪರ್ ಬಸ್‌ನಲ್ಲಿ ವೆಂಕಟೇಶ್ವರ ರಾವ್ ಎಂಬವರು ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ಇರುವ ಹೋಟೆಲ್‌ನಲ್ಲಿ ಊಟಕ್ಕಾಗಿ ಬಸ್ ನಿಲ್ಲಿಸಿದ ವೇಳೆ, ಅವರು ತಮ್ಮ ಬಳಿ ಇದ್ದ ಹಣದ ಬ್ಯಾಗ್‌ನ್ನು ಸೀಟ್‌ನಲ್ಲೇ ಬಿಟ್ಟು ಹೊರಗೆ ತೆರಳಿದ್ದರು. ಊಟದ ಬಳಿಕ ಹಿಂದಿರುಗಿ ಬಂದಾಗ ಬ್ಯಾಗ್ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಪ್ರಯಾಣಿಕರೊಬ್ಬರ ಪ್ರಕಾರ, ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಬಸ್‌ಗೆ ನುಗ್ಗಿ ಬ್ಯಾಗ್‌ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ವೆಂಕಟೇಶ್ವರ ರಾವ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0