24ನೇ ವರ್ಷದ "ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ" ಆರಂಭ : ಕೊಡಗಿನ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಬದ್ಧ : ಚೆಪ್ಪುಡಿರ ಅರುಣ್ ಮಾಚಯ್ಯ ಭರವಸೆ

24ನೇ ವರ್ಷದ "ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ" ಆರಂಭ : ಕೊಡಗಿನ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಬದ್ಧ : ಚೆಪ್ಪುಡಿರ  ಅರುಣ್ ಮಾಚಯ್ಯ ಭರವಸೆ

 ಮಡಿಕೇರಿ ಏ.3 : ಕೊಡವ ಕುಟುಂಬಗಳ ನಡುವೆ ಆಯೋಜಿತ 24ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ 2026 ಕ್ಕೆ ವಿದ್ಯುಕ್ತ ಚಾಲನೆ ದೊರೆತ್ತಿದೆ.

 ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕ್ರೀಡಾಕೂಟದ ಅಧ್ಯಕ್ಷ ಮುಕ್ಕಾಟಿರ ಸುರೇಶ್ ಪೆಮ್ಮಯ್ಯ ಮತ್ತಿತರ ಗಣ್ಯರು ಕೊಡವ ಕ್ರಿಕೆಟ್ ಅಸೋಷಿಯೇಷನ್ ನ ಧ್ವಜಾರೋಹಣ ನೆರವೇರಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಅವರು ಬೆಳ್ಳಿಯ ಬ್ಯಾಟ್‌ನಿಂದ ಬಾಲ್ ಅನ್ನು ಹೊಡೆಯುವ ಮೂಲಕ ಪ್ರತಿಷ್ಠಿತ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಗೆ ಚಾಲನೆ ನೀಡಿದರು. 

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಕೇಂದ್ರ ಸರಕಾರ ಗುರುತು ಮಾಡಿರುವ ದೇಶದ 10 ಕ್ರೀಡಾ ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆಯೂ ಸ್ಥಾನ ಪಡೆದಿದೆ. ದಕ್ಷಿಣ ಭಾರತದ ಪ್ರಥಮ ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ ಕೊಡಗು ಜಿಲ್ಲೆಗೆ ಸಲ್ಲುತ್ತದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುವ ಕ್ರೀಡಾ ಕೂಟಗಳೇ ಇದ್ದಕ್ಕೆ ಕಾರಣವಾಗಿದೆ ಎಂದರು.

ರಾಜ್ಯದ 17 ಮಂದಿ ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರೆ, ಈ ಪೈಕಿ 9 ಮಂದಿ ಕೊಡಗಿನ ಕ್ರೀಡಾ ಸಾಧಕರಾಗಿದ್ದಾರೆ. ಸಮುದಾಯಗಳಲ್ಲಿ ಸಂಘಟನೆ ಇದ್ದಾಗ ಮಾತ್ರವೇ ಕ್ರೀಡಾ ಕ್ಷೇತ್ರ ಬೆಳವಣಿಗೆ ಕಾಣಲು ಸಾಧ್ಯ. ವಿವಿಧ ಕ್ರೀಡಾ ಸಂಸ್ಥೆಗಳು ಸರಕಾರದ ಮಾನ್ಯತೆ ಪಡೆದಾಗ ಮಾತ್ರವೇ ಸೌಲಭ್ಯಗಳು ದೊರೆಯುತ್ತದೆ ಎಂದು ಅರುಣ್ ಮಾಚಯ್ಯ ಹೇಳಿದರು. 

ಕ್ರೀಡಾ ಕ್ಷೇತ್ರದ ಅಭಿವೃದ್ಧಿ;

ಕೊಡಗು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾ ಪ್ರತಿಭೆಗಳು ಇದ್ದಾರೆ. ಆದರೆ ಕ್ರೀಡಾ ಜಿಲ್ಲೆಯಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ಮೂಲ ಸೌಕರ್ಯಗಳ ಕೊರತೆ ಇದೆ. ಜಿಲ್ಲೆಯ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷನಾಗಿ ಬದ್ಧವಿರುವುದಾಗಿ ಅವರು ಭರವಸೆ ನೀಡಿದರು.

 ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕಗ ನಿರ್ಮಾಣಕ್ಕೆ 8 ಕೋಟಿ ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಲಿದೆ. ಮಹಿಳಾ ಕ್ರೀಡಾ ವಸತಿ ನಿಲಯಕ್ಕೆ 2 ಕೋಟಿ, ಪೊನ್ನಂಪೇಟೆಯಲ್ಲಿ 2 ಕೋಟಿ ರೂ ವೆಚ್ಚದ ಕ್ರೀಡಾ ಹಾಸ್ಟೇಲ್ ಕೂಡ ನಿರ್ಮಾಣ ಆಗಲಿದೆ.

ಕ್ರೀಡಾ ಸಂಕೀರ್ಣಕ್ಕಾಗಿ ಬಾಳುಗೋಡು ಬಳಿ 11 ಎಕರೆ ಪ್ರದೇಶವನ್ನು ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಗುರುತಿಸಿ ಕಾಯ್ದಿರಿಸಿದ್ದು, ಇದರ ನಿರ್ಮಾಣಕ್ಕೆ 30 ಕೋಟಿ ರೂ. ಅನುದಾನ ಲಭ್ಯವಿದೆ. ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಮೈದಾನಗಳು, ವಸತಿ ನಿಲಯಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಓಲಂಪಿಕ್ ಕ್ರೀಡೆಯನ್ನು ಗುರಿಯಾಗಿಸಿಕೊಂಡು ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಉನ್ನತಿ ಅಯ್ಯಪ್ಪ, ಸಿಂಚನ ಕಾವೇರಮ್ಮ, ಚಂದೂರ ಪೂವಣ್ಣ, ಎಸ್.ವಿ ಸುನೀಲ್, ತೆಕ್ಕಡ ಭವಾನಿ ಅವರಗಳ ಉನ್ನತ ತರಬೇತಿಗಾಗಿ ಸರಕಾರ ಪ್ರತಿ ತಿಂಗಳು 80 ಸಾವಿರ ರೂ. ಅನುದಾನವನ್ನು ಒದಗಿಸುತ್ತಿದೆ ಎಂದು ಅರುಣ್ ಮಾಚಯ್ಯ ತಿಳಿಸಿದರು.

ಹಿರಿಯರ ಪ್ರೋತ್ಸಾಹ ಸ್ಮರಣೀಯ;

ಅರಮೇರಿ ಕಳಂಚೇರಿ ಮಠದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಶತಮಾನ ಕಂಡಿರುವ ಹಲವಾರು ಶಾಲೆಗಳಿವೆ. ಈ ಶಾಲೆಗಳಲ್ಲಿ ಶತಮಾನಗಳ ಹಿಂದೆಯೇ ಹಿರಿಯರು ಕ್ರೀಡೆಗಳಿಗಾಗಿ ಸುಸಜ್ಜಿತ ಮೈದಾನಗಳನ್ನು ನಿರ್ಮಿಸಿದ್ದರು. ಹಿರಿಯರ ಪ್ರೋತ್ಸಾಹ ಮತ್ತು ಪ್ರೇರಣೆಗಳಿಂದ ಕ್ರೀಡಾಪಟುಗಳು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆÀ. ಎಲ್ಲಾ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರು ಹಿರಿಯರ ಈ ಕಾರ್ಯವನ್ನು ಸ್ಮರಿಸಬೇಕು ಎಂದು ಹೇಳಿದರು. 

ಪ್ರತಿಭೆಗಳನ್ನು ಹೊರತರಲು ಕ್ರೀಡಾಕೂಟಗಳು ನಡೆಯುತ್ತಿರಬೇಕು. ಕೊಡವ ಕ್ರಿಕೆಟ್ ಅಸೋಸಿಯೇಷನ್ ಆ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬರುತ್ತಿದ್ದು, ರಾಜ್ಯ, ರಾಷ್ಟç ಮಟ್ಟಕ್ಕೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಇದು ಸಹಕಾರಿಯಾಗಿದೆ. ಇಂತಹ ಕ್ರೀಡಾ ಕೂಟಗಳ ಜೊತೆಯಲ್ಲಿಯೇ ನಮ್ಮ ಸಂಸ್ಕೃತಿ, ಪದ್ದತಿ, ಪರಂಪರೆ, ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಕ್ರೀಡಾಪಟುಗಳು ಬದಲಾಗಬೇಕು;

ಹಿರಿಯ ಹಾಕಿ ಕ್ರೀಡಾಪಟು ಬಾಳೆಯಡ ಕರುಣ ಕಾಳಪ್ಪ ಮಾತನಾಡಿ, ಹಿಂದಿನ ಕಾಲದಲ್ಲಿ ಕ್ರೀಡೆಗೆ ಬೇಕಾದ ಸೌಲಭ್ಯಗಳು ಇರಲಿಲ್ಲ. ಅಂದು ಬಡತನದ ನಡುವೆಯೇ ಹತ್ತಾರು ಕ್ರೀಡಾಪಟುಗಳು ರಾಜ್ಯ ರಾಷ್ಟç ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಇಂದು ಎಲ್ಲಾ ಸೌಲಭ್ಯಗಳು ಲಭ್ಯವಿದ್ದು, ಅದನ್ನು ಬಳಸಿಕೊಳ್ಳಬೇಕು. ಕ್ರೀಡಾಪಟುಗಳು ಕೂಡ ಮಾನಸಿಕವಾಗಿ ಬದಲಾಗಬೇಕು ಎಂದು ಕಿವಿ ಮಾತು ಹೇಳಿದರು. 

ಕೊಡವ ಹಾಕಿ ಕ್ರೀಡೆಗೆ ಸರಕಾರ ಅನುದಾನ ನೀಡುತ್ತಿದೆ, ಅದರಂತೆಯೇ ಕೊಡವ ಕ್ರಿಕೆಟ್ ನಮ್ಮೆಗೂ ಅನುದಾನ ಒದಗಿಸುವಂತೆ ಶಾಸಕರ ಮೂಲಕ ಮುಕ್ಕಾಟಿರ ಕುಟುಂಬಸ್ಥರು ಸರಕಾರಕ್ಕೆ ಮನವಿ ಸಲ್ಲಿಸಿದಲ್ಲಿ ಅನುದಾನ ಪಡೆಯಲು ಸಾಧ್ಯವಾಗಬಹುದು. ಆ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ನಡೆಸುವಂತೆ ಅವರು ಸಲಹೆ ನೀಡಿದರು.

ಮುಕ್ಕಾಟಿರ ಕಪ್ ಕ್ರಿಕೆಟ್ ಕ್ರೀಡಾಕೂಟದ ಅಧ್ಯಕ್ಷ ಮುಕ್ಕಾಟಿರ ಸುರೇಶ್ ಪೆಮ್ಮಯ್ಯ ಅವರು ಮಾತನಾಡಿ, ಈ ಬಾರಿಯ ಕ್ರಿಕೆಟ್ ಪಂದ್ಯಾಟದಲ್ಲಿ 289 ತಂಡಗಳು ಹೆಸರು ನೋಂದಾಯಿಸಿಕೊAಡು ಪಂದ್ಯಾಟಕ್ಕೆ ಬೆಂಬಲ ನೀಡಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು. ವಿವಿಧ ಕ್ರೀಡಾ ಶಿಬಿರಗಳಿಗೆ ಮಕ್ಕಳನ್ನು ಭರ್ತಿ ಮಾಡಬೇಕು. ಇದರಿಂದ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಕ್ರೀಡಾಸಕ್ತಿ ಬೆಳೆಯಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ದೈಹಿಕ ಸಾಮರ್ಥ್ಯವೂ ವೃದ್ದಿಯಾಗುತ್ತದೆ. ವ್ಯಕ್ತಿತ್ವ ವಿಕಸನವೂ ಇದರಿಂದ ಸಾಧ್ಯವಾಗುತ್ತದೆ ಎಂದರು. 

ಕುಟುಂಬಗಳಿಗೆ ಗೌರವಾರ್ಪಣೆ;

ಕೊಡವ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದೊಂದಿಗೆ ಕಳೆದ 23 ವರ್ಷಗಳಿಂದ ನಿರಂತರವಾಗಿ ಕೊಡವ ಕ್ರಿಕೆಟ್ ನಮ್ಮೆ ಆಯೋಜಿಸಿಕೊಂಡು ಬಂದ 23 ಕುಟುಂಬಗಳಿಗೆ ಇದೇ ಸಂದರ್ಭ ಗಣ್ಯರು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಮೂರ್ನಾಡು ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಉಮ್ಮತ್ತಾಟ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಪ್ರದರ್ಶನ ಪಂದ್ಯ;

ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆಯ ಅಂಗವಾಗಿ ಬಲಿಷ್ಠ ಕ್ರಿಕೆಟ್ ತಂಡಗಳಾದ ನಾರ್ಥ್ ಕೂರ್ಗ್ ಮತ್ತು ಸೌತ್ ಕೂರ್ಗ್ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟ ನಡೆಯಿತು. ಗಣ್ಯರು ಆಟಗಾರರ ಪರಿಚಯ ಮಾಡಿಕೊಂಡು ಶುಭ ಕೋರಿದರು.

ಉದ್ಯಮಿ ಮಾಚೆಟ್ಟಿರ ಜಿನಿತ್ ಅಯ್ಯಪ್ಪ, ಮಣವಟ್ಟಿರ ಮಧು ಬೋಪಣ್ಣ, ಪೊಲೀಸ್ ಅಧಿಕಾರಿ ಪಟ್ರಪಂಡ ಪೊನ್ನಪ್ಪ, ಮೂರ್ನಾಡು ವಿದ್ಯಾ ಸಂಸ್ಥೆಯ ಪೆಮ್ಮುಡಿಯಂಡ ವೇಣು ಮತ್ತಿತ್ತರರು ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭಕ್ಕೂ ಮೊದಲು ಮುಕ್ಕಾಟಿರ ಕುಟುಂಬದ ಬೇತ್ರಿ ಐನ್ ಮನೆಯಲ್ಲಿ ಗುರುಕಾರೋಣರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಂದ್ಯಾಟ ನಿರ್ವಿಘ್ನವಾಗಿ ಸಾಗಲಿ ಎಂದು ಕುಟುಂಬ ಸದಸ್ಯರು ಪ್ರಾರ್ಥಿಸಿದರು. ಬಳಿಕ ಮೂರ್ನಾಡು ಗ್ರಾಮಕ್ಕೆ ಆಗಮಿಸಿ ಮುಕ್ಕಾಟಿರ ಕ್ರಿಕೆಟ್ ನಮ್ಮೆಯ ಲಾಂಛನ ಸಹಿತ ದುಡಿಕೊಟ್ ಪಾಟ್, ತಳಿಯ ತಕ್ಕಿ ಬೊಳ್ಚ, ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಮುಕ್ಕಾಟಿರ ಕುಟುಂಬಸ್ಥರು ಮೈದಾನದವರೆಗೆ ಮೆರವಣಿಗೆ ಸಾಗಿ ಬಂದರು. ಮುಕ್ಕಾಟಿರ ಹಿತೈಶಿ ನಾಣಯ್ಯ ಅವರ ಸ್ವಾಗತ ನೃತ್ಯ ಗಮನ ಸೆಳೆಯಿತು. ಏ.2ರಂದು ಪ್ರಾರಂಭವಾಗಿರುವ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ 2026 ಮೇ 1ರಂದು ಸಮಾರೋಪಗೊಳ್ಳಲಿದೆ.