ಕೊಡವ ಕುಟುಂಬ ತಂಡಗಳ ನಡುವಿನ 26ನೇ ಚೇನಂಡ ಹಾಕಿ ನಮ್ಮೆಗೆ ನಾಪೋಕ್ಲುವಿನಲ್ಲಿ ವರ್ಣ ರಂಜಿತ ಚಾಲನೆ; ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡವರನ್ನು ಗುರುತಿಸಲು ಹಾಕಿ ನಮ್ಮೆ ಕಾರಣ; ಶಾಸಕ. ಎ.ಎಸ್. ಪೊನ್ನಣ್ಣ

Apr 6, 2026 - 14:35
Apr 6, 2026 - 14:36
 0  288
ಕೊಡವ ಕುಟುಂಬ ತಂಡಗಳ ನಡುವಿನ 26ನೇ ಚೇನಂಡ ಹಾಕಿ ನಮ್ಮೆಗೆ ನಾಪೋಕ್ಲುವಿನಲ್ಲಿ ವರ್ಣ ರಂಜಿತ ಚಾಲನೆ;  ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡವರನ್ನು ಗುರುತಿಸಲು ಹಾಕಿ ನಮ್ಮೆ ಕಾರಣ; ಶಾಸಕ. ಎ.ಎಸ್. ಪೊನ್ನಣ್ಣ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ವಿಶ್ವಮಟ್ಟದಲ್ಲಿ ಪ್ರಾಖ್ಯಾತಿ ಪಡೆದಿರುವ ಕೊಡವ ಕುಟುಂಬ ತಂಡಗಳ ನಡುವಿನ 26ನೇ ವರ್ಷದ ಚೇಂನಂಡ ಹಾಕಿ ನಮ್ಮೆಗೆ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ. ಎಸ್. ತಿಮ್ಮಯ್ಯ ತಾಲೂಕು ಕ್ರೀಡಾಂಗಣದಲ್ಲಿ ವರ್ಣ ರಂಜಿತ ಚಾಲನೆ ನೀಡಲಾಯಿತು.

ನಾಪೋಕ್ಲುವಿನ ಪೊನ್ನಾಡ್ ಸೂಪರ್ ಮಾರ್ಕೆಟ್ ಆವರಣದಿಂದ ಚೇನಂಡ ಕುಟುಂಬಸ್ಥರು, ತಾಮನೆಯವರು, ಇದುವರೆಗೆ ಹಾಕಿನಮ್ಮೆ ಆಯೋಜಿತ ಕುಟುಂಬ ಸದಸ್ಯರು ಕುಟುಂಬದ ಧ್ವಜದೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ನಾಪೋಕ್ಲು ಪಟ್ಟಣದ ಮುಖ್ಯಬೀದಿಗಳ ಮೂಲಕ ಮೆರವಣಿಗೆ ಸಾಗಿ ಹಾಕಿ ಪಂದ್ಯಾವಳಿ ಆಯೋಜಿಸಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ತಾಲೂಕು ಮೈದಾನದಲ್ಲಿ ತಲುಪಿದರು.

ಬಳಿಕ ಮೈದಾನದಲ್ಲಿ ಪ್ರವೇಶಿಸುವ ವಿಶೇಷ ಸ್ಥಳದಲ್ಲಿ ಸ್ಥಾಪಿಸಲಾದ ಕೊಡವ ಹಾಕಿ ನಮ್ಮೆಯ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರ ಪುತ್ತಳಿಯನ್ನು ಅನಾವರಣಗೊಳಿಸಿ ಗೌರವಿಸಲಾಯಿತು. ಮೈದಾನ ಸುತ್ತಲು ಕಲಾತಂಡಗಳ ಪ್ರದರ್ಶನದೊಂದಿಗೆ ಚೇನಂಡ ಕುಟುಂಬ, ಕೊಡವಹಾಕಿ ಅಕಾಡೆಮಿ ಹಾಗೂ ವಿವಿಧ ಕುಟುಂಬ ಸದಸ್ಯರಿಂದ ಮೆರವಣಿಗೆ ನಡೆಯಿತು. ಚೇಂನಂಡ ಕುಟುಂಬದ ಅಧ್ಯಕ್ಷ ಕಂಬಣಿ ಕರುಂಬಯ್ಯ ಧ್ವಜಾರೋಹಣ ನೆರವೇರಿಸಿದರು.

 ಚೇನಂಡ ಹಾಕಿ ನಮ್ಮೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಡವರನ್ನು ಗುರುತಿಸಲು ಹಾಕಿ ಹಬ್ಬ ಕಾರಣವಾಗಿದೆ. ರಾಕಿ ಹಬ್ಬ ಆಯೋಜನೆ ಮಾಡಲು ದೊಡ್ಡ ಸಾಹಸ ಬೇಕು. ಚೇಂನಂಡ ಕುಟುಂಬ ಸಂಖ್ಯೆಯಲ್ಲಿ ಕಮ್ಮಿ ಇದ್ದರೂ ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವುದು ಶ್ಲಾಘನೀಯ.

ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಮುಖ್ಯ. ಸ್ಥಾನಮಾನ ಉಳ್ಳವರನ್ನು ಮಾತ್ರ ಗುರುತಿಸದೆ ಸಹಕಾರ ನೀಡಿದವರನ್ನು ಗುರುತಿಸಬೇಕಾಗಿದೆ. ಕೊಡವ ಹಾಕಿ ನಮ್ಮೆ ಯಶಸ್ಸಿಗೆ ಜಾತಿ ಧರ್ಮ ಮರೆತು ಎಲ್ಲರು ಸಹಕಾರನೀಡಿ ಕೈಜೋಡಿಸುತ್ತಾರೆ. ಸಮಾಜದಲ್ಲಿ ಯಾವುದೇ ಒಂದು ಕಾರ್ಯ ಅಭಿವೃದ್ಧಿಯಾಗಬೇಕಾದರೆ ಎಲ್ಲರ ಸಹಕಾರದಿಂದ ಮಾತ್ರ ಸಾಧ್ಯ ಎಂದರು.

 ಆರ್ಥಿಕ ಸಹಾಯ ಸಹಕಾರವಿಲ್ಲದೆ ಇಷ್ಟೊಂದು ದೊಡ್ಡ ಕ್ರೀಡಾಕೂಟ ಆಯೋಜನೆ ಮಾಡಲು ಅಸಾಧ್ಯ. ಸಹಕಾರ ಮಾಡಿದವರನ್ನು ಗುರುತಿಸುವುದು ಕೊಡವರ ಸಂಪ್ರದಾಯ ಅದನ್ನು ಎಲ್ಲರೂ ಕೂಡ ಮಾಡುತ್ತಿದ್ದೀರಿ ಎಂಬ ವಿಶ್ವಾಸ ನನಗಿದೆ. ಕೊಡಗಿನಲ್ಲಿ ಕ್ರೀಡೆಯ ಮೇಲೆ ಅಭಿಮಾನವಿಟ್ಟು ಎಲ್ಲರೂ ಕೂಡ ಸಹಕರಿಸುತ್ತಾರೆ. ದೊಡ್ಡ ಕ್ರೀಡಾಂಗಣ ಮಾಡಬೇಕಾದರೆ ಎಲ್ಲರನ್ನೂ ಸೇರಿಸಿ ಮಾಡಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದು ವಿರಾಜಪೇಟೆ ತಾಲೂಕಿನಲ್ಲಿ 40ಕೋಟಿ ರೂ ವೆಚ್ಚದಲ್ಲಿ ಕ್ರೀಡಾಶಾಲೆ ಪ್ರಾರಂಭಕ್ಕೆ ಅನುದಾನ ಬಿಡುಗಡೆಯಾಗಿದೆ.

ಅದರಂತೆ ಹಾಕಿ ನಮ್ಮೆಗು ಸರ್ಕಾರ ಅನುದಾನವನ್ನು ಬಿಡುಗಡೆ ಮಾಡುತ್ತಾ ಬಂದಿದೆ.ಮುಂದೆ ನಮ್ಮ ಮಕ್ಕಳ ಯುವಕ ಯುವತಿಯರ ಭವಿಷ್ಯ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ನಮ್ಮದಾಗಿದೆ ಎಂದ ಅವರು ಎಲ್ಲರ ಸಹಕಾರದೊಂದಿಗೆ ಹಲವಾರು ವರ್ಷಗಳಿಂದ ಕೊಡವರ ಸಂಸ್ಕೃತಿ, ಆಚಾರ ವಿಚಾರವನ್ನು ಉಳಿಸಿಕೊಂಡು ಬಂದಿರುವ ಹಾಕಿ ಉತ್ಸವ ಸೂರ್ಯ ಚಂದ್ರ ಇರುವವರೆಗೂ ನಡೆಯಬೇಕೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಮಾತನಾಡಿ ಕೊಡಗು ಜಿಲ್ಲೆ ಚಿಕ್ಕ ಜಿಲ್ಲೆಯಾದರು ಹಾಕಿ ಕ್ರೀಡೆಗೆ ಹೆಸರುವಾಸಿ ಹಾಗೂ ದೇಶಕ್ಕೆ ಅಧಿಕ ಕ್ರೀಡಾಪಟುಗಳನ್ನು ನೀಡಿದ ಜಿಲ್ಲೆಯಾಗಿದೆ.ಹಾಕಿ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರು ಇಡಿ ಕೊಡವ ಕುಟುಂಬಗಳನ್ನು ಒಂದಾಗಿ ಸೇರುವಂತೆ ಮಾಡಿದ್ದು ನಿಜಕ್ಕೂ ಶ್ಲಾಘನಿಯ.

ವಿರಾಜಪೇಟೆ ತಾಲೂಕಿನ ಬಾಡಗದಲ್ಲಿ ಹಾಕಿ ಸ್ಟೆಡಿಯಂ ನಿರ್ಮಾಣವಾದರೆ ಒಂದೇ ಜಾಗದಲ್ಲಿ ಹಾಕಿ ಕ್ರೀಡಾಕೂಟ ಆಯೋಜನೆಯಾದರೆ ಗ್ಯಾಲರಿ ನಿರ್ಮಾಣದ ಹಣ ಉಳಿಕೆಯಾಗಲಿದೆ. ಕೊಡಗು ಪ್ರಕೃತಿ ಸೌಂದರ್ಯದ ಜಿಲ್ಲೆಯಾಗಿದ್ದು ಯಾರು ಕೂಡ ಇಲ್ಲಿನ ಸ್ಥಳವನ್ನು ಮಾರಾಟ ಮಾಡದೆ ಅದನ್ನು ಉಳಿಸುವ ಜವಾಬ್ದಾರಿ ಮಾಡಬೇಕಾಗಿದೆ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಯುವಕರು ಹೆಚ್ಚಾಗಿ ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವುದು ಮುಖ್ಯ. ಎಲ್ಲ ಕುಟುಂಬಗಳು ಸೇರಿ ಕ್ರೀಡಾ ಸ್ಪೂರ್ತಿ ಮೆರೆಯುವುದು ಮುಖ್ಯವಾಗಿದೆ.ಕೊಡವ ಹಾಕಿ ಆಕಾಡೆಮಿಯು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದಿಂದ ಹಾಕಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ಇರಲಿದೆ ಎಂದರು.

 ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಆದಷ್ಟು ಶೀಘ್ರ ವಿರಾಜಪೇಟೆಯಲ್ಲಿ ನೂತನ ಕ್ರೀಡಾ ಶಾಲೆ ಪ್ರಾರಂಭವಾಗಲಿದೆ. ಇದಕ್ಕೆ ಶಾಸಕ ಪೊನ್ನಣ್ಣ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.ಸರ್ಕಾರ ಈಗಾಗಲೇ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು ನಮ್ಮಕೊಡವ ಕುಟುಂಬಗಳ ಕ್ರೀಡಾಪಟುಗಳಿಗೆ ಈಗಾಗಲೇ ತಿಂಗಳಿಗೆ 80 ಸಾವಿರ ಹಣವನ್ನು ನೀಡುತ್ತಿದೆ. ಅಲ್ಲದೆ ವಿವಿಧ ಇಲಾಖೆಯಲ್ಲಿ ಹುದ್ದೆಗಳನ್ನು ನೀಡಿದ್ದಾರೆ ಎಂದರು.

 ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಾಂಡ ಸುದು ಬೋಪ್ಪಣ್ಣ ಮಾತನಾಡಿ ಕೊಡವ ಹಾಕಿ ಅಕಾಡೆಮಿಗೆ ಸ್ವಂತವಾಗಿ ನೂತನ ಕಟ್ಟಡ ನಿರ್ಮಾಣ ಮಾಡಲು ಜಾಗದ ತಯಾರಿ ನಡೆಯುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಿಮ್ಮೆಲ್ಲರ ಸಹಾಯಬೇಕು ಎಂದರಲ್ಲದೆ ಮುಂದಿನ 10 ವರ್ಷಗಳ ಕಾಲ 2036ರವರೆಗೆ ಹಾಕಿ ಹಬ್ಬದ ನಡೆಸಲು ಕುಟುಂಬಸ್ಥರು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಚೇನಂಡ ಹಾಕಿ ಪಂದ್ಯಾವಳಿಯನ್ನು ಶಾಸಕ ಎ.ಎಸ್. ಪೊನ್ನಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರು ಬೆಳ್ಳಿಯ ಹಾಕಿ ಸ್ಟಿಕ್ನಿಂದ ಬೆಳ್ಳಿಯ ಚೆಂಡು ತಳ್ಳುವ ಮೂಲಕ ಒಂದು ತಿಂಗಳ ಕಾಲ ನಡೆಯುವ ಹಾಕಿ ನಮ್ಮೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ಪ್ರಯುಕ್ತ ಯುಎಇ ಕೋರ್ಗ್ ಹಾಗೂ ತಾಮನೆ ಇಲೆವೆನ್ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಯುಎಇ ಕೂರ್ಗ್ ತಂಡ 4-1 ಗೋಲುಗಳಿಂದ ತಾಮನೆ ಇಲೆವೆನ್ ತಂಡವನ್ನು ಪರಾಭವಗೊಳಿಸಿತು. ಮತ್ತೊಂದು ಪ್ರದರ್ಶನ ಪಂದ್ಯದಲ್ಲಿ ಎಂಇಜಿ ತಂಡ ಜೈನ್ ಕಾಲೇಜು ತಂಡವನ್ನು 1-0 ಗೋಲುಗಳಿಂದ ಪರಾಭವಗೊಳಿಸಿತು.

ಕಾರ್ಯಕ್ರಮದಲ್ಲಿ ಕೊಡವ ಹಾಕಿ ಅಕಾಡಮಿಯ ರೋಲಿಂಗ್ ಟ್ರೋಫಿಯನ್ನು ಮಂಡೆಪಾಂಡೆ ಕುಟುಂಬಸ್ಥರು ಚೇನಂಡ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಚೇಂನಂಡ ಕುಟುಂಬದ ಹಾಕಿ ಸಮಿತಿ ಅಧ್ಯಕ್ಷ ಪಿ. ಕರುಂಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೇನಂಡ ಕುಟುಂಬದ ಪಟ್ಟೆದಾರ ಬಿ. ಪೊನ್ನಪ್ಪ,ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವಕುಮಾರ್,ಕೆ. ಎಸ್. ಪುಣಚ್ಚ,ಎಸ್ ಎಲ್ ಎನ್ ನಿರ್ದೇಶಕ ಸಾಂತಪ್ಪನ್,ಚೇನಂಡ ಹಾಕಿ ಸಮಿತಿ ಕಾರ್ಯಾಧ್ಯಕ್ಷ ದೀನ ಜಂಗಪ್ಪ, ಕೊಡವ ಹಾಕಿ ಅಕಾಡೆಮಿಯ ಪ್ರಮುಖರು, ವಿವಿಧ ಕೊಡವ ಕುಟುಂಬಗಳ ಅಧ್ಯಕ್ಷರುಗಳು,ಚೇನಂಡ ಕುಟುಂಬದ ಹಾಕಿ ಸಮಿತಿ ಪದಾಧಿಕಾರಿಗಳು, ಕುಟುಂಬ ಸದಸ್ಯರು, ಅಧಿಕ ಸಂಖ್ಯೆಯಲ್ಲಿ ಕ್ರೀಡಾ ಭಿಮಾನಿಗಳು ಪಾಲ್ಗೊಂಡಿದ್ದರು.

 ಕಾರ್ಯಕ್ರಮದಲ್ಲಿ ಚೇನಂಡ ಮನಸ್ವಿ ಮುತ್ತಪ್ಪ ಪ್ರಾರ್ಥಿಸಿದರು.ಮಾಳೇಟಿರ ಶ್ರೀನಿವಾಸ್,ಚೋಕಿರ ಅನಿತಾ ದೇವಯ್ಯ,ಅಜ್ಜೇಟಿರ ವಿಕ್ರಂ ನಿರೂಪಿಸಿದರು,ಚೇನಂಡ ಹಾಕಿ ಸಮಿತಿಯ ಅಧ್ಯಕ್ಷ ಕಂಬಣಿ ಕರುಂಬಯ್ಯ ಸ್ವಾಗತಿಸಿ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 1
Sad Sad 0
Wow Wow 0