Kodagu

7ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ಶ್ರೀಗೋಪಾಲಕೃಷ್ಣ ದೇವಸ್ಥಾನ ವತಿಯಿಂದ 2ನೇ ವರ್ಷದ ಕೃಷ್ಣ-ರಾಧೆ ಛದ್ಮವೇಷ ಸ್ಪರ್ಧೆ

admincoorgdaily

ಸುಂಟಿಕೊಪ್ಪ: ಸಮೀಪದ 7ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ಶ್ರೀಗೋಪಾಲಕೃಷ್ಣ ದೇವಸ್ಥಾನ ವತಿಯಿಂದ 2ನೇ ವರ್ಷದ ಕೃಷ್ಣ- ರಾಧೆ ಛದ್ಮವೇಷ ಸ್ಪರ್ಧೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. ದೇವಾಲಯದ ಆವರಣದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಮತ್ತು 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಮಹಾಗಣಪತಿ ಮತ್ತು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಆಡಗಿರುವ ಸೂಕ್ತ ಪ್ರತಿಭೆಯನ್ನು ಹೊರತರಲು ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ.ಇಂದಿನ ಮಕ್ಕಳು ಮೊಬೈಲ್ ಅಂತರ್ಜಾಲತಾಣಗಳಲ್ಲಿ ತೊಡಗಿಕೊಳ್ಳುತ್ತಿದ್ದು, ಅದನ್ನು ತಪ್ಪಿಸುವ ಮೂಲಕ ಈ ರೀತಿಯ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿರುವುದರಿಂದ ಮಕ್ಕಳು ಪ್ರತಿಭೆಗಳನ್ನು ಅನಾವರಣಗೊಳಿಸಲು ಪೋಷಕರೊಂದಿಗೆ ಆಗಮಿಸಿ ತೊಡಗಿಸಿಕೊಂಡಿರುವುದು ಆಶಾದಾಯಕ ವಿಚಾರವಾಗಿದೆ.ಪೋಷಕರು ಮತ್ತು ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಬಹುಮಾನವಾಗಿ ಪುಸ್ತಕಗಳನ್ನು ನೀಡುತ್ತಿರುವುದು ಅತ್ಯಂತ ಸಂತೋಷ ಮತ್ತು ಉಳಿದವರಿಗೆ ಅನುಸರಣಿಯ ಮಾದರಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಮಕ್ಕಳ ಸ್ಪರ್ಧೆಯಲ್ಲಿ 28 ಮಕ್ಕಳು ಪಾಲ್ಗೊಂಡಿದ್ದು, ಮೊದಲ ಮೂರು ಸ್ಥಾನಗಳನ್ನು ಕ್ರಮವಾಗಿ ಆದ್ವಿಕ್, ಎಂ.ಹೆಚ್.ಚರಿಸ್ಮಾ ಮತ್ತು ಶ್ರೀನ್ಯ ಪಡೆದರು. 5 ವರ್ಷ ಮೇಲ್ಪಟ್ಟ ಮಕ್ಕಳ ಸ್ಪರ್ಧೆಯಲ್ಲಿ 25 ಮಕ್ಕಳು ಪಾಲ್ಗೊಂಡಿದ್ದು ಮೊದಲ ಮೂರು ಸ್ಥಾನಗಳನ್ನು ವಿಸ್ಮಿತ ಶೇಖರ್, ವಿನಯ ಪ್ರಶಾಂತ್ ಮತ್ತು ಅಮರನಾಥ್ ಪಡೆದುಕೊಂಡರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಬಹುಮಾನಗಳಾಗಿ ಶ್ರೀಕೃಷ್ಣ ಚರಿತ್ರೆ ಪುಸ್ತಕವನ್ನು ವಿತರಿಸಲಾಯಿತು.

ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಪತ್ರಕರ್ತರುಗಳಾದ ಕೆ.ತಿಮ್ಮಪ್ಪ, ಬಿ.ಸಿ.ದಿನೇಶ್ ಹಾಗೂ ನೃತ್ಯ ಕಲಾವಿದ ಶಾನು ಮತ್ತು ರಮ್ಯ ದಿನೇಶ್ ಕಾರ್ಯನಿರ್ವಹಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು‌.ಮದ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಾಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಕಾರ್ಯದರ್ಶಿ ಶಿವಪ್ಪ, ಸಮಿತಿ ಸದಸ್ಯರುಗಳಾದ ರುಕ್ಮಯ್ಯ ,ರಾಮಚಂದ್ರ,ಡಿ.ಎಂ. ಕಿರಣ್, ಉಣ್ಣಿಪ್ರಕಾಶ್, ದಾಸಂಡ ಜಗದೀಶ್, ದಾಸಂಡ ರಂಜನ್ , ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಇತರರು ಉಪಸ್ಥಿತರಿದ್ದರು.