ಸೆ.1 ರಂದು ಸಿಎನ್‌ಸಿಯಿಂದ 31ನೇ ವರ್ಷದ ಕೈಲ್ ಪೊವ್ದ್ ಆಚರಣೆ

Aug 26, 2026 - 18:19
 0  26
ಸೆ.1 ರಂದು ಸಿಎನ್‌ಸಿಯಿಂದ 31ನೇ ವರ್ಷದ ಕೈಲ್ ಪೊವ್ದ್ ಆಚರಣೆ

ಮಡಿಕೇರಿ ಆ.25 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಸೆ.1 ರಂದು 31ನೇ ವರ್ಷದ ಕೈಲ್ ಪೊವ್ದ್ ಆಚರಣೆ ಮಡಿಕೇರಿಯ ಹೊರವಲಯದ ಕ್ಯಾಪಿಟಲ್ ವಿಲೇಜ್ ಮಂದ್ ನಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ.

ಕೊಡವಲ್ಯಾಂಡ್ ಹಕ್ಕುಗಳ ನಿರ್ಣಯಕ್ಕಾಗಿ, ಕೊಡವ ಜನಾಂಗೀಯ ಸಾಂಸ್ಕೃತಿಕ ಪರಂಪರೆ ಮತ್ತು ಸಮರ ಪರಂಪರೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನ್ಯಾಷನಲ್ ಫ್ರಂಟ್ ಫಾರ್ ನ್ಯೂ ಸ್ಟೇಟ್ಸ್ ಅಧ್ಯಕ್ಷರು ಹಾಗೂ ಉತ್ತರಾಂಧ್ರ ಪ್ರತ್ಯೇಕ ರಾಜ್ಯ ಚಳವಳಿಯ ಮುಖಂಡರಾದ ಮೆಟ್ಟಾ ರಾಮರಾವ್, ಐಆರ್‌ಎಸ್ (ನಿವೃತ್ತ), ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ವೈದ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಡಾ.ಮಾತಂಡ ಅಯ್ಯಪ್ಪ ಗೌರವ ಅತಿಥಿಯಾಗಿ ಹಾಗೂ ಚೋಪ್ರಾ ಫೌಂಡೇಶನ್ ನ ಸಿಇಒ ಬಲ್ಯಾಟಂಡ ಕವೇರ್ ಪೂಣಚ್ಚ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಾಧವಿ ಮೆಟ್ಟಾ ರಾಮರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಎನ್.ಯು.ನಾಚಪ್ಪ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಜಾನಪದ ಪುಷ್ಪ ತೋಕ್ ಪೂವ್ ಬಳಸಿ ಬಂದೂಕುಗಳನ್ನು ಅಲಂಕರಿಸಿ ಪೂರ್ವಜರಿಗೆ ತರ್ಪಣ ಅರ್ಪಿಸುವ ಆಚರಣೆ ನಡೆಯಲಿದೆ. ಕೊಡವರ ಸಾಂಪ್ರದಾಯಿಕ ಬಂದೂಕು, ಆಯುಧಗಳು ಹಾಗೂ ಪೂರ್ವಜರ ಪರಂಪರೆಯನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು.

ಸಿಎನ್‌ಸಿಯ ಪ್ರಮುಖ ಬೇಡಿಕೆಗಳಾದ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ವಿಶೇಷ ಜನಾಂಗೀಯ ವರ್ಗೀಕರಣ, ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ, ಬಂದೂಕು/ತೋಕ್ ಆಚರಣೆಗೆ ಧಾರ್ಮಿಕ ರಕ್ಷಣೆ, ಕೊಡವರ ಅಮೂರ್ತ ಸಾಂಸ್ಕೃತಿಕ ಪರಂಪರೆಗೆ ಯುನೆಸ್ಕೋ ಮಾನ್ಯತೆ, ಕಾವೇರಿ ನದಿಗೆ ಕಾನೂನುಬದ್ಧ ವ್ಯಕ್ತಿ ಸ್ಥಾನಮಾನ ಹಾಗೂ ತಲಕಾವೇರಿಯನ್ನು ಪವಿತ್ರ ಯಾತ್ರಾ ಕೇಂದ್ರವಾಗಿ ಘೋಷಿಸುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಇದೇ ಸಂದರ್ಭ ಮಂಡಿಸಲಾಗುವುದು.

ಇದರೊAದಿಗೆ ದೇವಟ್‌ಪರಂಬು ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ಸ್ಮಾರಕಗಳ ನಿರ್ಮಾಣ, ಕೊಡವ ಪ್ರದೇಶದಲ್ಲಿ ಇನ್ನರ್ ಲೈನ್ ಪರ್ಮಿಟ್ ಜಾರಿ, ಕೊಡವರಿಗೆ ಪ್ರತ್ಯೇಕ ಸಂಸದೀಯ ಹಾಗೂ ವಿಧಾನಸಭಾ ಕ್ಷೇತ್ರದ ಬೇಡಿಕೆ ಮತ್ತು ಪಾರಂಪರಿಕ ಭೂಮಿಗಳ ಮರುಸ್ಥಾಪನೆಯನ್ನೂ ಪ್ರತಿಪಾದಿಸಲಾಗುವುದು.

ಕೊಡವ ಸಮುದಾಯಕ್ಕೆ ಸಂವಿಧಾನಾತ್ಮಕ ರಕ್ಷಣೆ ಅಗತ್ಯವಿದ್ದು, ಸಮುದಾಯದ ಸಾಂಸ್ಕೃತಿಕ ಹಾಗೂ ಜನಾಂಗೀಯ ಅಸ್ತಿತ್ವವನ್ನು ಅಖಂಡವಾಗಿ ಉಳಿಸುವುದು ಸಿಎನ್‌ಸಿ ಉದ್ದೇಶವಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಆಯುಧ ಪೂಜೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಕೊಡವ ಶೈಲಿಯ ಭೋಜನ ಕೂಟವಿರುತ್ತದೆ. ಎಲ್ಲಾ ಕೊಡವರು ಹಾಗೂ ಕೊಡವತಿಯರು ಬಂದೂಕು ಹಾಗೂ ಒಡಿಕತ್ತಿಯೊಂದಿಗೆ ಸಾಮೂಹಿಕ ಪವಿತ್ರ ಪೂಜೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0