ತಾಯಿಯ ಕಣ್ಣೆದುರೇ 5 ವರ್ಷದ ಬಾಲಕನ ಶಿರಚ್ಛೇದ; ಹಂತಕನ ಥಳಿಸಿ ಹತ್ಯೆ

Sep 27, 2025 - 17:28
 0  1.2k
ತಾಯಿಯ ಕಣ್ಣೆದುರೇ 5 ವರ್ಷದ ಬಾಲಕನ ಶಿರಚ್ಛೇದ;  ಹಂತಕನ ಥಳಿಸಿ ಹತ್ಯೆ

ಧಾರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥನೆಂದು ಶಂಕಿತ ವ್ಯಕ್ತಿಯೊಬ್ಬನು ಶುಕ್ರವಾರ ಐದು ವರ್ಷದ ಬಾಲಕ ವಿಕಾಸ್‌ನನ್ನು ಅವನ ತಾಯಿಯ ಕಣ್ಣೆದುರೇ ಕ್ರೂರವಾಗಿ ಶಿರಚ್ಛೇದ ಮಾಡಿದ್ದಾನೆ.

 ಪೊಲೀಸರ ಪ್ರಕಾರ, 25 ವರ್ಷದ ಮಹೇಶ್ ಎಂಬಾತ ಬೈಕ್‌ ನಲ್ಲಿ ಬಂದು ಕಾಲು ಸಿಂಗ್ ಅವರ ಮನೆಯಲ್ಲಿ ಪ್ರವೇಶಿಸಿದ್ದಾನೆ. ಕುಟುಂಬವು ಅವನನ್ನು ಹಿಂದೆಂದೂ ನೋಡಿರಲಿಲ್ಲ. ಇದ್ದಕ್ಕಿದ್ದಂತೆ ಮನೆಯಲ್ಲಿ ಬಿದ್ದಿದ್ದ ಹರಿತವಾದ ಗುದ್ದಲಿಯನ್ನು ಎತ್ತಿಕೊಂಡು ಮಗುವಿನ ಮೇಲೆ ದಾಳಿ ನಡೆಸಿದ ಆತ, ಕ್ಷಣಾರ್ಧದಲ್ಲೇ ಶಿರಚ್ಛೇದ ಮಾಡಿದ್ದಾನೆ. ಮಗುವನ್ನು ರಕ್ಷಿಸಲು ಪ್ರಯತ್ನಿಸಿದ ತಾಯಿ ಗಾಯಗೊಂಡಿದ್ದಾರೆ.

ಆಕೆಯ ಕೂಗು ಕೇಳಿ ನೆರೆಹೊರೆಯವರು ಧಾವಿಸಿ ಬಂದು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಗಂಭೀರ ಗಾಯಗೊಂಡ ಮಹೇಶ್ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

 “ಈ ಅಪರಾಧ ಅತ್ಯಂತ ಹೃದಯವಿದ್ರಾವಕವಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ. ಪ್ರಾಥಮಿಕ ತನಿಖೆಯಿಂದ ಆರೋಪಿ ಮಾನಸಿಕ ಅಸ್ಥಿರನಾಗಿದ್ದನೆಂಬ ಮಾಹಿತಿ ಲಭಿಸಿದೆ,” ಎಂದು ಧಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಅವಸ್ಥಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 ಮಹೇಶ್ ಅಲಿರಾಜ್‌ಪುರ ಜಿಲ್ಲೆಯ ಜೋಬತ್ ಬಾಗ್ಡಿ ಗ್ರಾಮದ ನಿವಾಸಿ ಎಂದು ತನಿಖೆಯಿಂದ ತಿಳಿದುಬಂದಿದೆ. ಆತ ಕಳೆದ ಮೂರು-ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದನು. ಘಟನೆಯ ಒಂದು ಗಂಟೆ ಮೊದಲು ಹತ್ತಿರದ ಅಂಗಡಿಯಲ್ಲಿ ಕಳವು ಮಾಡಲು ಪ್ರಯತ್ನಿಸಿದ್ದನೆಂಬ ಮಾಹಿತಿ ದೊರೆತಿದೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 2
Wow Wow 1