State News

ಆಗಸದಲ್ಲಿ ವಿಮಾನದಂತೆ ಹಾರಬೇಕು ಎಂದು ಕನಸು ಕಂಡಿದ್ದ ಕೊಡಗಿನ ಕುವರಿಯ ಬಾಳಿಗೆ ಕಂಟಕವಾದ ಪ್ರೇಮಿ : ಕಾಲೇಜು ಬಿಟ್ಟರೂ ತಪ್ಪದ ಆತನ ಕಾಟಕ್ಕೆ ಬಲಿಯಾದಳು

admincoorgdaily

ಮಡಿಕೇರಿ: ಬೆಂಗಳೂರಿನ ಪ್ರತಿಷ್ಠಿತ ಕೋಶಿಯಸ್ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಬಿಎ ಏವಿಯೇಷನ್ ಪದವಿ ಪಡೆಯುತ್ತಿದ್ದ ಸನಾ ಪರ್ವಿನ್ (19) ಶುಕ್ರವಾರ, ಆಕೆ ನೆಲೆಸಿದ್ದ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಅವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಂಗದೂರು ನಿವಾಸಿ. ಪ್ರಕರಣಕ್ಕೆ ಸಂಬಂಧ ಬೆಂಗಳೂರಿನ ಬಾಗಲೂರು ಠಾಣೆಯಲ್ಲಿ ಕೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ ಕೇರಳ ಮೂಲದ ರಿಫಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಸನಾ ಪರ್ವಿನ್ ತನ್ನ ಪಿಯುಸಿ ವ್ಯಾಸಾಂಗವನ್ನು ಸುಂಟಿಕೊಪ್ಪ ಸಂತ ಮೇರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದರು. ಬಳಿಕ, ಬೆಂಗಳೂರಿನ ಕಾಡುಸೊಣ್ಣಪ್ಪಹಳ್ಳಿಯ ಕೋಶಿಯಸ್ ವಿದ್ಯಾಸಂಸ್ಥೆಯಲ್ಲಿ ಬಿಬಿಎ ಏವಿಯೇಷನ್ ಗೆ ದಾಖಲಾತಿ ಪಡೆದಿದ್ದರು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏವಿಯೇಷನ್ ಪದವಿ ಮುಗಿಸಿ ಸನಾ ಪರ್ವೀನ್ ವಿಮಾನಯಾನ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಬೇಕಿತ್ತು. ವಿಮಾನದಂತೆ ಹಾರುವ ಕನಸು ಕಂಡಿದ್ದ ಆಕೆಯ ರೆಕ್ಕೆಯನ್ನು ಒಬ್ಬ ವಿಚಿತ್ರ ಸ್ವಭಾವದ ಪ್ರೇಮಿಯಿಂದಾಗಿ ಆಕೆಯ ಕನಸಿನ ರೆಕ್ಕೆ ಬಿಚ್ಚಿಕೊಳ್ಳುವ ಮುನ್ನವೇ ಕತ್ತರಿಸಿ ಹೋಗಿದೆ.

ಅದೇ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಕೇರಳ ಮೂಲದ ರಿಫಾಸ್ ನೊಂದಿಗೆ ಸನಾಗೆ ಪ್ರೇಮಾಂಕುರವಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಈ ಮಧ್ಯೆ ರಿಫಾಸ್ ನ ವರ್ತನೆ ಬದಲಾಗತೊಡಗಿತು. ಸನಾ ಪರ್ವಿನ್ ತನ್ನ ತರಗತಿಯ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದುದಕ್ಕೆ ರಿಫಾಸ್, ಸನಾ ಜೊತೆ ಜಗಳವಾಡುತ್ತಿದ್ದ. ಅದಲ್ಲದೇ ನೀನು ಯಾವ ಹುಡುಗರೊಂದಿಗೂ ಮಾತನಾಡಬಾರದು, ಕಾಲೇಜಿನ ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂದು ಆಕೆಗೆ ರಿಫಾಸ್ ತಾಕೀತು ಮಾಡತೊಡಗಿದ ಎಂದು ತಿಳಿದು ಬಂದಿದೆ. 

ಸನಾ ಪರ್ವಿನ್ ಪ್ರತಿಭಾವಂತೆ. ಪಠ್ಯೇತರ ಚಟುವಟಿಕೆಯಲ್ಲೂ ಅವರು ಮುಂದು. ಗಾಯನದಲ್ಲಿ ಆಸಕ್ತಿಯಿತ್ತು. ಅವರು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾವಹಿಸಿದ್ದರು. ಆದರೆ ರಿಫಾಸ್ ಆಕೆಯನ್ನು ವೇದಿಕೆ ಏರಲೂ ಕೂಡ ಬಿಡದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಷ್ಟರ ಮಟ್ಟಿಗೆ ಆತನ ಕಿರುಕುಳ ಮುಂದುವರೆದಿತ್ತು.

 ಕಾಲೇಜಿನಲ್ಲಿ ನಿರಂತರವಾಗಿ ಸನಾಗೆ, ರಿಫಾಸ್ ಕಿರುಕುಳ ನೀಡುತ್ತಿದ್ದ ಎಂದು ಅವರ ಗೆಳತಿಯರು, ಕಾಲೇಜು ವಿದ್ಯಾರ್ಥಿಗಳು Instagram ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರ ದಾಖಲೆಗಳು ಕೂರ್ಗ್ ಡೈಲಿಗೆ ಲಭ್ಯವಾಗಿದೆ.

ರಿಫಾಸ್ ಕಾಲೇಜಿನಿಂದ ತೇರ್ಗಡೆಯಾದ ನಂತರವೂ, ಪುನಃ ಕಾಲೇಜು ಮತ್ತು ಸನಾ ಪರ್ವಿನ್ ನೆಲೆಸಿದ್ದ ಕಾಡುಸೊಣ್ಣಪ್ಪಹಳ್ಳಿಯ ಗ್ರೀನ್ ಗಾರ್ಡನ್ ಬಡಾವಣೆಯ ಪಿಜಿಗೆ ಬಂದು ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ಸನಾರ ಆಪ್ತ ವಲಯ ಹೇಳುತ್ತದೆ. 

 ಸನಾ ತನ್ನ ತರಗತಿಯ ಹುಡುಗರೊಂದಿಗೂ ಮಾತನಾಡಬಾರದು ಎಂದು ಪದೇ ಪದೇ ರಿಫಾಸ್ ಆಕೆಗೆ ಬೆದರಿಕೆ ಹಾಕುತ್ತಿದ್ದನು ಎನ್ನಲಾಗಿದೆ. ಸನಾರೊಂದಿಗೆ ಯಾರಾದರೂ ಹುಡುಗರು ಮಾತನಾಡಿದರೆ ಅವರಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಮಟ್ಟಕ್ಕೂ ರಿಫಾಸ್ ಇಳಿಯುತ್ತಿದ್ದ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಿಜಿಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಯತ್ನ!:

ರಿಫಾಸ್ ನೊಂದಿಗೆ ಪ್ರೀತಿಯ ಸಂಬಂಧವನ್ನು ಕೊನೆಗೊಳಿಸಲು ಹಲವು ಬಾರಿ ಸನಾ ಪರ್ವಿನ್ ಪ್ರಯತ್ನಿಸಿದ್ದರು. ಆದರೆ ರಿಫಾಸ್ ಆಕೆಯನ್ನು ಬೆದರಿಸುತ್ತಿದ್ದ ಎಂದು ಸನಾ ಅವರ ಆಪ್ತ ವಲಯ ಹೇಳುತ್ತದೆ.

ಅದಲ್ಲದೇ ಈ ಹಿಂದೆ ರಿಫಾಸ್ ನ ಕಿರುಕುಳ ತಾಳಲಾರದೆ ಸನಾ ಪರ್ವಿನ್ ಪಿಜಿಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡುವುದಕ್ಕೆ ಆಕೆ ಶ್ರಮಿಸಿದ್ದರು. ತನ್ನ ಕೈ ಕತ್ತರಿಸಿ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ವಿದ್ಯಾರ್ಥಿಗಳು ಕೂರ್ಗ್ ಡೈಲಿಗೆ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೇ ರಿಫಾಸ್ ಸನಾರಿಂದ ಚಿನ್ನವನ್ನು ಕೂಡ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ. 

ರಿಫಾಸ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ರಿಫಾಸ್ ಎಂಬಾತನ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಫಾಸ್ ವಿರುದ್ಧ ಸನಾ ಪರ್ವಿನ್ ತಂದೆ ಅಬ್ದುಲ್ ನಝೀರ್ ಅವರು ನೀಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಬೆಂಗಳೂರಿನ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 “ಕಾಲೇಜಿನಲ್ಲಿ ಓದಿದ್ದ ರಿಫಾಸ್ ಪಾಸ್ ಔಟ್ ಆದ ಬಳಿಕವೂ ಆಗಾಗ ಕಾಲೇಜಿಗೆ ಬಂದು ಸನಾಗೆ ಕಿರುಕುಳ ನೀಡುತ್ತಿದ್ದ. ಅವಳನ್ನು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದ. ಇದೇ ಕಾರಣಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ”.

ಮುಸ್ತಫಾ, ಸನಾಳ ಸಂಬಂಧಿ ಹಾಗೂ ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ