ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ

Feb 27, 2026 - 15:44
 0  438
ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ

ವಿರಾಜಪೇಟೆ:ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬಿಟ್ಟಂಗಾಲದಲ್ಲಿ ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮ ಜರುಗಿತು. ಬಿಟ್ಟಂಗಾಲದ ಬಿ. ಶೆಟ್ಟಿಗೇರಿ ಜಂಕ್ಷನ್‌ನಿಂದ ಶೋಭಾಯಾತ್ರೆ ಪ್ರಾರಂಭಗೊಂಡು ಆರ್‌ಕೆ.ಎಫ್ ಸಭಾಂಗಣದವರೆಗೆ ಸಾಗಿ ಬಂತು. ಶೋಭಾಯಾತ್ರೆಯಲ್ಲಿ ಕೇಸರಿ ಶಾಲು ಹಾಗೂ ಪೇಟ ಧರಿಸಿದ ಮಹಿಳೆಯರು ಪುರುಷರು ಸರತಿ ಸಾಲಿನಲ್ಲಿ, ಘೋಷಣೆಗಳನ್ನು ಕೂಗುತ ಸಾಗಿದರು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೇರಳದ ಚಂಡೆ ಮೇಳ, ತಮಟೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾರತಮಾತೆಯ ಭಾವಚಿತ್ರ ಹೊತ್ತಿರುವ ವಾಹನದೊಂದಿಗೆ ಮೆರವಣಿಗೆ ಆರ್.ಕೆ.ಎಫ್ ಸಭಾಂಗಣದವರೆಗೆ ನಡೆಸಿದರು. ನಂತರ ಹಿಂದೂ ಸಂಗಮದ ಸಮಾವೇಶದ ಸಭೆ ಜರುಗಿತು. ಈ ಸಂದರ್ಭ ಅತಿಥಿಗಳು ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ವಯಂ ಸೇವಕ ಸಂಘದ ಪ್ರಮುಖರಾದ ಪಿ.ಎನ್. ವಿನೋದ್ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವುದೊಂದೆ ನಮ್ಮ ಧರ್ಮ. ಸ್ವಯಂ ಸೇವಕ ಸಂಘದಲ್ಲಿರುವ ಸೇವಕರು ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಾರೆ. ರಾಷ್ಟ್ರವನ್ನು ಉಳಿಸುವ ಸಲುವಾಗಿ ಹಿಂದೂತ್ವ ಬೇಕು. ಪ್ರತಿ ಮನೆಯಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಆಚಾರ ವಿಚಾರ, ಹಬ್ಬ ಹರಿದಿನಗಳ ಮಹತ್ವ ತಿಳಿಸಿಕೊಡುವಂತಾಗಬೇಕು. ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡುವ ಯುವಜನತೆಗೆ ಹಿರಿಯರು ಪ್ರೋತ್ಸಾಹ ನೀಡುವಂತಾಗಬೇಕು. ಕುಗ್ಗಿಸುವ ಕೆಲಸ ಮಾಡಬಾರದು. ಪೂರ್ವಜರಿಂದ ಉಳಿಸಿಕೊಂಡು ಬಂದಿರುವ ಸಂಸ್ಕೃತಿಯನ್ನು ಮನದಟ್ಟುಮಾಡಿಕೊಂಡು ಸಮಾಜದಲ್ಲಿ ಮಕ್ಕಳನ್ನು ಶ್ರೇಷ್ಟರನ್ನಾಗಿ ಬೆಳೆಸಬೇಕು ಎಂದು ಕರೆ ನೀಡಿದರು.

ಕಾಸರಗೋಡಿನ ಪ್ರಚಾರಕ್, ಸ್ವಯಂ ಸೇವಕ ಸಂಘದ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ದಿಕ್ಸೂಚಿ ಬಾಷಣ ಮಾಡಿ ಸನಾತನ ಹಿಂದೂ ಧರ್ಮದ ನೀತಿ ನಿಯಮವನ್ನು ಪಾಲಿಸುವಂತೆ ಯುವ ಪೀಳಿಗೆಗೆ ಕರೆ ನೀಡಿದರು. ದೇಶಭಕ್ತರಾಗಿ, ದೇಶ ಭ್ರಷ್ಟರಾಗಬೇಡಿ, ಹಿಂದೂ ಸಂಗಮ ಕರ್ಯಕ್ರಮ ಸಾಮರಸ್ಯ, ಕುಟುಂಬ ಪ್ರಬೋಧನೆ, ಸ್ವದೇಶಿಭಾವ, ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆಯ ಮೂಲದ ಉದ್ದೇಶವಾಗಿದೆ ಎಂದರು. 1925 ರಲ್ಲಿ ಸಂಘ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ವಿಜಯ ದಶಮಿಯಂದು ಸ್ಥಾಪನೆಗೊಂಡಿದೆ. ಈಗ ಸಂಘ ನೂರು ವರ್ಷ ಪೂರೈಸಿದೆ. ರಾಷ್ಟç ನಿರ್ಮಾಣವೇ ಧ್ಯೇಯವಾಗಿದ್ದು, ಎಲ್ಲರೂ ದೇಶ ಕಟ್ಟುವ ಕಾಯಕ ಮಾಡೋಣ ಎಂದರಲ್ಲದೆ ಹಿಂದೂ ಸಂಗಮ ಸಮಾವೇಶದ ಉದ್ದೇಶ ಹಾಗೂ ಹಿಂದೂ ಬಾಂಧವರು ಪಾಲಿಸಬೇಕಾದ ನಿಯಮ, ಭಾರತಮಾತೆಯ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗೆ ಸವಿವರವಾಗಿ ವಿಚಾರಗಳನ್ನು ತಿಳಿಸಿದರು.  

ಸ್ವಯಂ ಸೇವಕ ಸಂಘದ ಹಿರಿಯರಾದ ನಾಣಮಂಡ ವೇಣು ಮಾಚಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಕುಪ್ಪಂಡ ಮನು ಪೂವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಗಣೇಶ್ ಗೌಡ, ರೇಖಾ ಗಣೇಶ್, ಅಮ್ಮುಣಿಚಂಡ ರಂಜು ಸೇರಿದಂತೆ ಪ್ರಮುಖರು ಹಾಜರಿದ್ದರು. ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಟ್ಟಂಗಾಲ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಿಂದೂ ಭಾಂಧವರು ಪಾಲ್ಗೊಂಡಿದ್ದರು. ಶೋಭಾಯಾತ್ರೆ ಸಂದರ್ಭ ತಂಪು ಪಾನೀಯ ವಿತರಿಸಲಾಯಿತು. ಬಳಿಕ ಮದ್ಯಾಹ್ನ ನೆರೆದದವರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0