ಶ್ರೀ ಕೋದಂಡ ರಾಮೋತ್ಸವ ಸಮಿತಿಯಿಂದ ಮಾ.25, 26 ಮತ್ತು 27ರಂದು ಅದ್ಧೂರಿ ರಾಮೋತ್ಸವ

ಶ್ರೀ ಕೋದಂಡ ರಾಮೋತ್ಸವ ಸಮಿತಿಯಿಂದ ಮಾ.25, 26 ಮತ್ತು 27ರಂದು ಅದ್ಧೂರಿ ರಾಮೋತ್ಸವ

ಮಡಿಕೇರಿ ಫೆ.೧೪ : ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಾ.೨೫, ೨೬ ಮತ್ತು ೨೭ರಂದು ಮಡಿಕೇರಿ ನಗರದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ೩೬ನೇ ವ?ರ್ದ ರಾಮೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿದೆ.

ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಅವರು "ಸರ್ವೇಜನಾ: ಸುಖಿನೋಭವಂತು" ಆದರ್ಶದಡಿ ಸರ್ವ ಸಮುದಾಯಗಳು ಒಗ್ಗೂಡಿ ಮೂರು ದಿನಗಳ ರಾಮೋತ್ಸವ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿಂದ ಯಶಸ್ವಿಗೊಳಿಸುವುದಾಗಿ ತಿಳಿಸಿದರು. 

ಕಳೆದ ವರ್ಷ ಶ್ರೀರಾಮನ ಆದರ್ಶಗಳನ್ನು ಪಾಲನೆ ಮಾಡುತ್ತಾ ಸಾವಿರಾರು ಭಕ್ತರು ರಾಮೋತ್ಸವವನ್ನು ಸಂಭ್ರಮಿಸಿದ್ದಾರೆ, ನಗರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಈ ಬಾರಿ ಕೂಡ ದಾನಿಗಳು ಸೇರಿದಂತೆ ಸರ್ವರ ಸಹಕಾರದಿಂದ ರಾಮೋತ್ಸವ ಸಡಗರದಿಂದ ನಡೆಯಲಿದ್ದು, ಸುಮಾರು ೩೦ಲಕ್ಷ ರೂ. ಖರ್ಚಾಗಲಿದೆ ಎಂದರು.   

ಮಾ.೨೫ ರಂದು ಸಂಜೆ ೬ ಗಂಟೆಗೆ ನಗರದಲ್ಲಿ ಶ್ರೀರಾಮನ ಪಲ್ಲಕ್ಕಿ ಮತ್ತು ಕಳಸದೊಂದಿಗೆ ಭಕ್ತರ ಬೃಹತ್ ಮೆರವಣಿಗೆ ನಡೆಯಲಿದೆ. ಶ್ರೀಕೋದಂಡರಾಮ ದೇವಾಲಯದಲ್ಲಿ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ. 

ಮಾ.೨೬ ರಂದು ಶ್ರೀಕೋದಂಡರಾಮ ದೇವಾಲಯದಲ್ಲಿ ಬೆಳಿಗ್ಗೆಯಿಂದ ದೈವ ನೃತ್ಯ, ಮಹಾಪೂಜೆ, ಪ್ರತಿಷ್ಠಾಪನಾ ವಾರ್ಷಿಕೋತ್ಸವ, ರಾಮನವಮಿ ಕಾರ್ಯಕ್ರಮಗಳು ಹಾಗೂ ಭಜನೆ ಶ್ರದ್ಧಾಭಕ್ತಿಯಿಂದ ಜರುಗಲಿದೆ. 

ಮಾ.೨೭ ರಂದು ಸಂಜೆ ೬.೩೦ ಗಂಟೆಗೆ ನಗರದ ಬನ್ನಿ ಮಂಟಪದ ಬಳಿಯಿಂದ ದೇವಾನುದೇವತೆಗಳ ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲಾತಂಡಗಳ ಬೃಹತ್ ಶೋಭಾಯಾತ್ರೆ ಸಾಗಲಿದೆ. ಈ ಶೋಭಾಯಾತ್ರೆಗೆ ಮಕ್ಕಳ ಮಂಟಪಗಳ ಮೆರಗು ಜೊತೆಯಾಗಲಿದೆ. ಒಂದು ಟ್ರ್ಯಾಕ್ಟರ್ ಮಾತ್ರ ಬಳಸಬಹುದಾಗಿದ್ದು, ೨೦ ಸ್ತಬ್ಧಚಿತ್ರಗಳಿಗೆ ಅವಕಾಶ ಕಲ್ಪಿಸಲಾಗುವುದು. ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಆಸಕ್ತಿ ಇರುವವರು ೯೮೮೦೭೭೮೦೪೭ ನ್ನು ಸಂಪರ್ಕಿಸಬಹುದಾಗಿದೆ.

ನಗರದ ಗಾಂಧಿ ಮೈದಾನದಲ್ಲಿ ಸಂಜೆ ೬ ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಲಿವೆ. ರಾಜ್ಯ ಮಟ್ಟದ ಹಾಗೂ ಕೊಡಗು ಜಿಲ್ಲೆಯ ಕಲಾತಂಡಗಳಿಂದ, ಕಲಾವಿದರಿಂದ ವಿವಿಧ ಸಾಂಸ್ಕೃತಿಕ ವೈಭವ ವಿಜೃಂಭಿಸಲಿದೆ. ಎಲ್ಲಾ ಕಾರ್ಯಕ್ರಮಗಳು ಮಿನಿ ದಸರಾದಂತೆ ನಡೆಯಲಿದ್ದು, ಶಾಸಕರಾದಿಯಾಗಿ ಹಲವು ದಾನಿಗಳು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಶೋಭಾಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು ೫ ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಕಳೆದ ವರ್ಷ ಸರ್ವ ಭಕ್ತರ, ಎಲ್ಲಾ ಸಮುದಾಯದ ಜನರ, ಸಂಘ ಸಂಸ್ಥೆಗಳ ಪ್ರಮುಖರ, ಜನಪ್ರತಿನಿಧಿಗಳ, ಅಧಿಕಾರಿಗಳ, ಪೊಲೀಸ್ ಇಲಾಖೆಯ ಹಾಗೂ ದಾನಿಗಳ ಸಹಕಾರದಿಂದ ಶ್ರದ್ಧಾಭಕ್ತಿಯ ರಾಮೋತ್ಸವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಈ ಬಾರಿಯೂ ಸರ್ವರ ಸಹಕಾರವನ್ನು ಕೋರುತ್ತಿದ್ದೇವೆ ಎಂದರು.

ಶ್ರೀಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೆ.ಎಂ.ಗಣೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷರುಗಳಾಗಿ ಅಂಬೆಕಲ್ ನವೀನ್, ಸವಿತಾ ರಾಕೇಶ್, ಡಾ.ಎಸ್.ಎಂ.ಧನಂಜಯ್, ಗೌರವ ಅಧ್ಯಕ್ಷರಾಗಿ ಕೋಲೆಯಂಡ ನಿಶಾ ಮೋಹನ್, ಖಜಾಂಚಿಯಾಗಿ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ, ಮುಖ್ಯ ಸಲಹೆಗಾರರಾಗಿ ಜಿ.ರಾಜೇಂದ್ರ, ಶ್ರೀಕೋದಂಡರಾಮ ಟ್ರಸ್ಟ್‌ನ ಅಧ್ಯಕ್ಷರಾಗಿ ಹೆಚ್.ಎನ್.ನಂಜುಂಡ ಹಾಗೂ ಜ್ಯೋತಿ ಯುವಕ ಸಂಘದ ಅಧ್ಯಕ್ಷರಾಗಿ ಹೆಚ್.ಎನ್.ವಿಶ್ವ ಕಾರ್ಯನಿರ್ವಹಿಸುತ್ತಿದ್ದಾರೆ. 

ರಾಮೋತ್ಸವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಹೆಚ್.ವಿ.ರವೀಂದ್ರ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಭಾರತಿ ರಮೇಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಡಾ.ಜಯಂತಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎನ್.ಮಹೇಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಅನಿಲ್ ಹೆಚ್.ಟಿ, ಆಹಾರ ಸಮಿತಿಯ ಅಧ್ಯಕ್ಷರಾಗಿ ಹೆಚ್.ವಿ.ಸುಧಾಕರ್, ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿ ಎನ್.ಪರಮೇಶ್, ಉಪಾಧ್ಯಕ್ಷರಾಗಿ ದಶಮಂಟಪದ ಅಧ್ಯಕ್ಷ ಬಿ.ಎಂ.ಹರೀಶ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಜಿ.ಆರ್.ಪ್ರಜ್ವಲ್, ವೇದಿಕೆ ಸಮಿತಿಯ ಅಧ್ಯಕ್ಷರಾಗಿ ಜಿ.ಆರ್.ಪ್ರಜ್ಞಾ, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ವಿ.ಎಸ್.ವಿನೋದ್ ಕುಮಾರ್, ಉಪಾಧ್ಯಕ್ಷರಾಗಿ ಪೂರ್ಣಿಮ, ಭಜನಾ ಸಮಿತಿಯ ಅಧ್ಯಕ್ಷರಾಗಿ ವಿಶಾಲಾಕ್ಷಿ ಸುಕುಮಾರ್, ಕಳಸ ಸಮಿತಿಯ ಅಧ್ಯಕ್ಷರಾಗಿ ಎಸ್.ಲಿಖಿತ, ಪ್ರಸಾದ ಸಮಿತಿಯ ಅಧ್ಯಕ್ಷರಾಗಿ ವಿದ್ಯಾ ವೆಂಕಟರಮಣ, ಹಣಕಾಸು ಸಮಿತಿಯ ಸಂಚಾಲಕರುಗಳಾಗಿ ಹೆಚ್.ಹೆಚ್.ಮಂಜುನಾಥ್ ಹಾಗೂ ಪುದಿಯನೆರವನ ರೇವತಿ ರಮೇಶ್, ವೈದಿಕ ಸಮಿತಿಯ ಅಧ್ಯಕ್ಷರಾಗಿ ರಾಮಸೇವಾ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್.ಗೋಪಿನಾಥ್ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ಕೆ.ಎಂ.ಗಣೇಶ್ ಮಾಹಿತಿ ನೀಡಿದರು. 

ಖಜಾಂಚಿ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ ಮಾತನಾಡಿ ಕಳೆದ ವರ್ಷ ೨೦ ಲಕ್ಷ ರೂ. ವೆಚ್ಚದಲ್ಲಿ ಅತ್ಯಂತ ವಿಜೃಂಭಣೆಯಿಂದ ರಾಮೋತ್ಸವ ಆಚರಿಸಲಾಗಿದೆ. ಈ ಬಾರಿಯ ರಾಮೋತ್ಸವಕ್ಕೆ ೩೦ಲಕ್ಷ ರೂ. ಖರ್ಚಾಗಲಿದೆ. ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು, ದಾನಿಗಳು ವಂತಿಗೆಯನ್ನು ಚೆಕ್ ರೂಪದಲ್ಲಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಡಾ.ಜಯಂತಿ ಶೆಟ್ಟಿ ಮಾತನಾಡಿ ರಾಜಕೀಯ ರಹಿತವಾಗಿ ಎಲ್ಲರೂ ಒಗ್ಗಟ್ಟಿನಿಂದ ರಾಮೋತ್ಸವವನ್ನು ಆಚರಿಸುತ್ತಿದ್ದು, ಸರ್ವರೂ ಕೈಜೋಡಿಸುವಂತೆ ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಶ್ರೀಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷ ಅಂಬೆಕಲ್ ನವೀನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಡಾ.ಜಯಂತಿ ಶೆಟ್ಟಿ ಹಾಗೂ ಶ್ರೀಕೋದಂಡರಾಮ ಟ್ರಸ್ಟ್ ನ ಅಧ್ಯಕ್ಷ ಹೆಚ್.ಎನ್.ನಂಜುಂಡ ಉಪಸ್ಥಿತರಿದ್ದರು.