ಬ್ಲ್ಯಾಕ್‌ಮೇಲ್‌ ಕಾಟಕ್ಕೆ ಮನನೊಂದು ಪುಟ್ಟ ಮಗನ ಜತೆ ತಾಯಿ ಆತ್ಮಹತ್ಯೆ

Dec 31, 2025 - 01:28
 0  1.6k
ಬ್ಲ್ಯಾಕ್‌ಮೇಲ್‌ ಕಾಟಕ್ಕೆ ಮನನೊಂದು ಪುಟ್ಟ ಮಗನ ಜತೆ ತಾಯಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ

ತುಮಕೂರು, ಡಿ. 29: ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದಲ್ಲಿ ತಾಯಿ–ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಗಂಭೀರ ತಿರುವು ಸಿಕ್ಕಿದೆ. ಪರಪುರುಷನ ಸಹವಾಸದ ವಿಚಾರವನ್ನು ಮುಂದಿಟ್ಟುಕೊಂಡು ನಡೆದ ಬ್ಲ್ಯಾಕ್‌ಮೇಲ್‌ಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳೆ, ತನ್ನ 8 ವರ್ಷದ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೃತರನ್ನು ಹಂಸಲೇಖ (32) ಹಾಗೂ ಆಕೆಯ ಪುತ್ರ ಗುರುಪ್ರಸಾದ್ (8) ಎಂದು ಗುರುತಿಸಲಾಗಿದೆ. ಹಂಸಲೇಖ, ಮಲ್ಲಿಕಾರ್ಜುನ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು ಎನ್ನಲಾಗಿದ್ದು, ದೂರವಾಣಿ ಸಂಭಾಷಣೆಗಳು ಹಾಗೂ ವಿಡಿಯೋಗಳನ್ನು ಆಧಾರವಾಗಿ ಮಾಡಿಕೊಂಡು ಆಕೆಯನ್ನು ನಿರಂತರವಾಗಿ ಬೆದರಿಸಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಈ ಬ್ಲ್ಯಾಕ್‌ಮೇಲ್‌ ಕಾಟದಿಂದ ಭಯಭೀತರಾದ ಹಂಸಲೇಖ ಶುಕ್ರವಾರ ಮನೆ ತೊರೆದು ಸ್ನೇಹಿತೆಯ ಮನೆಯಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.

ಶನಿವಾರ ಬೆಳಗ್ಗೆ ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ–ಮಗ ಇಬ್ಬರೂ ನೀರಿಗೆ ಹಾರಿ ಸಾವನ್ನಪ್ಪಿರುವುದು ಪತ್ತೆಯಾಯಿತು. ಮಾಹಿತಿ ಪಡೆದ ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಹಂಸಲೇಖ ಭೂಪಸಂದ್ರ ಗ್ರಾಮದ ನಾಗೇಶ್ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರು ಇದ್ದರು. ಕೆಲವು ವರ್ಷಗಳ ಹಿಂದೆ ನಾಗೇಶ್ ಅನಾರೋಗ್ಯದಿಂದ ಮೃತಪಟ್ಟ ಬಳಿಕ, ಮೂರು ವರ್ಷಗಳ ಹಿಂದೆ ಅವರ ಸಹೋದರ ಲೋಕೇಶ್ ಜತೆ ಹಂಸಲೇಖಗೆ ಮದುವೆ ಮಾಡಲಾಗಿತ್ತು. ಈ ಕುಟುಂಬೀಯ ಹಿನ್ನೆಲೆಯ ನಡುವೆಯೇ ನಡೆದ ಬ್ಲ್ಯಾಕ್‌ಮೇಲ್‌ ಘಟನೆ ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಬ್ಲ್ಯಾಕ್‌ಮೇಲ್‌ ಆರೋಪದ ಕುರಿತು ತನಿಖೆ ಆರಂಭಿಸಲಾಗಿದೆ. ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 2
Dislike Dislike 2
Love Love 3
Funny Funny 0
Angry Angry 0
Sad Sad 2
Wow Wow 0