CRIME

ಬುರ್ಖಾ ಧರಿಸಿ ಅಕ್ಕನ ಮನೆಗೆ ಕನ್ನ ; ಸಹೋದರ ಸೇರಿ ಮೂವರ ಬಂಧನ

admincoorgdaily

ಬುರ್ಖಾ ಧರಿಸಿ ಅಕ್ಕನ ಮನೆಗೆ ಕನ್ನ ; ಸಹೋದರ ಸೇರಿ ಮೂವರ ಬಂಧನ

ಚಿಕ್ಕಬಳ್ಳಾಪುರ, ಡಿ.24: ಗುರುತು ಪತ್ತೆಯಾಗದಂತೆ ಬುರ್ಖಾ ಧರಿಸಿಕೊಂಡು ಸಹೋದರಿಯ ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಸಹೋದರ ಮತ್ತು ಆತನ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ಸುಮಾರು ₹60 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಡಿಸೆಂಬರ್ 10ರಂದು ಮುಂಜಾನೆ 3 ಗಂಟೆ ಸುಮಾರಿಗೆ ಶಿಡ್ಲಘಟ್ಟ ನಗರದ ಇಲಾಹಿ ನಗರ ಪ್ರದೇಶದಲ್ಲಿ ದರೋಡೆ ನಡೆದಿದೆ. ಮನೆಯಲ್ಲಿ ಒಬ್ಬರೇ ಇದ್ದ 50 ವರ್ಷದ ಮುಬಾರಕ್ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ ಕೈ–ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದರು. ಬಳಿಕ 451 ಗ್ರಾಂ ಚಿನ್ನ ಹಾಗೂ 819 ಗ್ರಾಂ ಬೆಳ್ಳಿ ಸೇರಿ ಒಟ್ಟು ₹60 ಲಕ್ಷ ಮೌಲ್ಯದ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಹಲ್ಲೆಗೆ ಒಳಗಾದ ಮುಬಾರಕ್ ಅವರು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾದ 11 ದಿನಗಳಲ್ಲೇ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು 54 ವರ್ಷದ ಇನಾಯತ್ ಪಾಷಾ ಮತ್ತು ಆತನ ಪುತ್ರರಾದ 25 ವರ್ಷದ ಶಾರುಖ್ ಪಾಷಾ ಹಾಗೂ 24 ವರ್ಷದ ಸಾಹಿಲ್ ಪಾಷಾ ಎಂದು ಗುರುತಿಸಲಾಗಿದೆ.

ತನಿಖೆಯಲ್ಲಿ, ಮುಬಾರಕ್ ಮತ್ತು ಆಕೆಯ ಸಹೋದರರು ಇಲಾಹಿ ನಗರದಲ್ಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆಂದು ತಿಳಿದು ಬಂದಿದೆ. ಮುಬಾರಕ್ ಅವರ ಪತಿ ಹಾಗೂ ಕುಟುಂಬ ಸದಸ್ಯರು ಅಜ್ಮೀರ್ ಗೆ ತೆರಳಿದ್ದ ಸಂದರ್ಭದಲ್ಲಿ ಆಕೆ ಮನೆಯಲ್ಲಿ ಒಬ್ಬರೇ ಇದ್ದುದನ್ನು ಗಮನಿಸಿ ಆರೋಪಿಗಳು ದರೋಡೆಗೆ ಯೋಜನೆ ರೂಪಿಸಿದ್ದರು. ದರೋಡೆ ವೇಳೆ ಒಬ್ಬ ಆರೋಪಿ ಬುರ್ಖಾ ಧರಿಸಿಕೊಂಡು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಶಿಡ್ಲಘಟ್ಟ ನಗರದ ವಿಲೇಚರ್ ಕ್ವಾಟ್ರಸ್ ನಿವಾಸಿಗಳಾಗಿದ್ದು, ಇನಾಯತ್ ಪಾಷಾ ತನ್ನ ಅಕ್ಕನ ಮನೆಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನಾಭರಣವಿದೆ ಎಂಬ ಮಾಹಿತಿ ತಿಳಿದಿದ್ದರಿಂದ ಪುತ್ರರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಂಧಿತರಿಂದ ದೋಚಿದ ಚಿನ್ನ–ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಪತ್ತೆಹಚ್ಚಿ ಆಭರಣಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾದ ಶಿಡ್ಲಘಟ್ಟ ವೃತ್ತದ ಸಿಪಿಐ ಆನಂದಕುಮಾರ್ ನೇತೃತ್ವದ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಶ್ಲಾಘಿಸಿದ್ದಾರೆ.