ವಿರಾಜಪೇಟೆಯ ಯುವತಿಯೊಂದಿಗೆ ಬೆಂಗಳೂರಿನ ಲಾಡ್ಜ್ ನಲ್ಲಿ 9 ದಿನ ತಂಗಿದ್ದ ಪುತ್ತೂರಿನ ಯುವಕ ಪತ್ತೆಯಾಗಿದ್ದು ಶವವಾಗಿ! ಯುವತಿ ನಾಪತ್ತೆ; ವಯಾಗ್ರಾ ಓವರ್ ಡೋಸ್ ಶಂಕೆ

Oct 19, 2025 - 10:14
 0  3.5k
ವಿರಾಜಪೇಟೆಯ ಯುವತಿಯೊಂದಿಗೆ ಬೆಂಗಳೂರಿನ ಲಾಡ್ಜ್ ನಲ್ಲಿ 9 ದಿನ ತಂಗಿದ್ದ ಪುತ್ತೂರಿನ ಯುವಕ ಪತ್ತೆಯಾಗಿದ್ದು ಶವವಾಗಿ!  ಯುವತಿ ನಾಪತ್ತೆ; ವಯಾಗ್ರಾ ಓವರ್ ಡೋಸ್ ಶಂಕೆ

ಬೆಂಗಳೂರು: ಮಂಗಳೂರಿನ ಕಾಲೇಜು ಸ್ನೇಹಿತೆಯೊಂದಿಗೆ ಬೆಂಗಳೂರಿನ ಲಾಡ್ಜ್ನಲ್ಲಿ 9 ದಿನ ತಂಗಿದ್ದ ಪುತ್ತೂರಿನ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.  

ಮೃತರನ್ನು ದಕ್ಷಿಣ ಕನ್ನಡದ ಪುತ್ತೂತಿನ ತಕ್ಷಿತ್ (20) ಎಂದು ಗುರುತಿಸಲಾಗಿದೆ. ಮೂಲತಃ ತಮಿಳುನಾಡಿನವರಾದ ಇವರು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ಬೆಳಗ್ಗಿನಿಂದ ತಕ್ಷಿತ್ ಅವರ ತಂದೆ ಪ್ರಸಾದ್ ರವರಿಗೆ ಮಗನ ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದರು. ಸಂಜೆ ವೇಳೆಗೆ ಮಡಿವಾಳ ಪೊಲೀಸರು ಕರೆಮಾಡಿ ತಕ್ಷಿತ್ ಲಾಡ್ಜ್ನಲ್ಲಿ ನಿಗೂಢವಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ತಕ್ಷಿತ್ ಮಂಗಳೂರಿನ ಪಣಂಬೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಅದೇ ಕಾಲೇಜಿನ ವಿರಾಜಪೇಟೆಯ ಪ್ರಿಯಾಂಕಾ ಎಂಬ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆದಿದ್ದು, ನಂತರ ಇಬ್ಬರೂ ಕಾಲೇಜು ಬಿಟ್ಟಿದ್ದರು ಎನ್ನಲಾಗಿದೆ. ಕುಟುಂಬಕ್ಕೆ “ಮೈಸೂರಿಗೆ ಓದಲು ಹೋಗುತ್ತಿದ್ದೇನೆ” ಎಂದು ಹೇಳಿ ತಕ್ಷಿತ್ ಬೆಂಗಳೂರಿಗೆ ಬಂದು, ಅಕ್ಟೋಬರ್ 9ರಿಂದ ಪ್ರಿಯಾಂಕಾ ಜೊತೆ ನಗರದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ನಲ್ಲಿ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಾಡ್ಜ್ ಮೂಲಗಳ ಪ್ರಕಾರ, ಕಳೆದ ಎಂಟು ದಿನಗಳಿಂದ ಈ ಜೋಡಿ ರೂಮ್ನಲ್ಲೇ ಉಳಿದುಕೊಂಡು ಸ್ವಿಗ್ಗಿ ಸೇರಿದಂತೆ ಆನ್ಲೈನ್ ಸೇವೆಗಳ ಮೂಲಕ ಆಹಾರ ತರಿಸಿಕೊಂಡು ಸೇವಿಸುತ್ತಿದ್ದರು. ಘಟನೆ ನಡೆದ ದಿನವೂ ಅವರು ಆನ್ಲೈನ್ ಮೂಲಕ ಊಟ ಮಾಡಿದ ನಂತರ ಇಬ್ಬರಿಗೂ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿದ್ದವು.

ಈ ಸಂದರ್ಭ ಪ್ರಿಯಾಂಕಾ ಲಾಡ್ಜ್ ತೊರೆದಿದ್ದು, ನಂತರ ತಕ್ಷಿತ್ ಕೊಠಡಿಯಿಂದ ಹೊರಬಂದಿರಲಿಲ್ಲ. ಹಲವು ಗಂಟೆಗಳ ಕಾಲ ಯಾವುದೇ ಚಲನವಲನ ಕಂಡುಬರದ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ, ತಕ್ಷಿತ್ ಮೃತದೇಹ ಪತ್ತೆಯಾಯಿತು. ತಕ್ಷಣ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ.

ಘಟನೆಯು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಕ್ಷಿತ್ ಸಾವಿನ ವೇಳೆಯಲ್ಲಿ ಪ್ರಿಯಾಂಕಾ ರೂಮ್ನಲ್ಲೇ ಇದ್ದಳಾ? ಇಬ್ಬರ ನಡುವೆ ಯಾವುದೇ ಕಲಹ ನಡೆದಿತ್ತೇ? ಆತ್ಮಹತ್ಯೆ, ಹೃದಯಾಘಾತ ಅಥವಾ ಫುಡ್ ಪಾಯಿಸನ್ ಯಾವುದು ಸಾವಿಗೆ ಕಾರಣ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವು ಮೂಲಗಳು “ಅತಿಯಾದ ವಯಾಗ್ರ ಸೇವನೆಯಿಂದ ಸಾವು ಸಂಭವಿಸಿರಬಹುದು” ಎಂಬ ಶಂಕೆಯನ್ನೂ ವ್ಯಕ್ತಪಡಿಸಿವೆ.

ಮಡಿವಾಳ ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಿಯಾಂಕಾಳ ಪತ್ತೆಗಾಗಿ ಶೋಧ ಕಾರ್ಯವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

What's Your Reaction?

Like Like 5
Dislike Dislike 0
Love Love 1
Funny Funny 0
Angry Angry 2
Sad Sad 1
Wow Wow 2