ಮಿರರ್ ಗೆ ಗುದ್ದಿದ ಕೋಪಕ್ಕೆ ಯುವಕನ ಬೈಕ್ ಗೆ ಡಿಕ್ಕಿ ಹೊಡೆದು ಕೊಲೆ! : ಬೆಂಗಳೂರಿನಲ್ಲಿ ರೋಡ್ ರೇಜ್ | ಯೂ ಟರ್ನ್ ತೆಗೆದುಕೊಂಡು ಮತ್ತೆ ಡಿಕ್ಕಿ ಹೊಡೆದ ದಂಪತಿಯ ಬಂಧನ
ಬೆಂಗಳೂರು, ಅ. 29: ನಗರದ ಬೀದಿಗಳಲ್ಲಿ ದಿನೇ ದಿನೇ ಉಗ್ರ ರೂಪ ಪಡೆಯುತ್ತಿರುವ ರೋಡ್ ರೇಜ್ ಘಟನೆಗಳು ಮತ್ತೊಮ್ಮೆ ಯುವ ಜೀವವೊಂದನ್ನು ಕಸಿದುಕೊಂಡಿವೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ದಾರುಣ ಘಟನೆಯಲ್ಲಿ, ಕೇವಲ ಕಾರಿನ ಮಿರರ್ ಬೈಕ್‌ಗೆ ತಾಗಿದ ಕೋಪಕ್ಕೆ ಬೈಕ್ ಸವಾರನ ಮೇಲೆ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಶನಿವಾರ ರಾತ್ರಿ 11.30ರ ಸುಮಾರಿಗೆ ಶ್ರೀರಾಮ ಲೇಔಟ್ ಬಳಿ ದರ್ಶನ್ ಮತ್ತ ವರುಣ್ ಎಂಬ ಇಬ್ಬರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಕಾರಿನ ಮಿರರ್ ಅವರ ಬೈಕ್‌ಗೆ ತಾಗಿತ್ತು. ಪರಿಣಾಮ ಕಾರಿನ ಮಿರರ್ ನ ಗಾಜು ಒಡೆದಿದೆ. ಕಾರಿನಲ್ಲಿದ್ದ ಮನೋಜ್ ಕುಮಾರ್ ಹಾಗೂ ಅವರ ಪತ್ನಿ ಆರತಿ ಶರ್ಮ ಬೈಕ್ ಸವಾರರನ್ನು ಸುಮಾರು ಎರಡು ಕಿಲೋಮೀಟರ್‌ಗಳಷ್ಟು ಹಿಂಬಾಲಿಸಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಯೂ ಟರ್ನ್ ತೆಗೆದುಕೊಂಡು ಮತ್ತೊಮ್ಮೆ ಡಿಕ್ಕಿ!
ಮೊದಲ ಬಾರಿ ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಸ್ಥಳದಿಂದ ತಪ್ಪಿಸಿಕೊಂಡ ದಂಪತಿ, ಮತ್ತೆ ಯೂ ಟರ್ನ್ ತೆಗೆದುಕೊಂಡು ಬಂದು ಎರಡನೇ ಬಾರಿ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ದರ್ಶನ್ ಮತ್ತು ವರುಣ್ ಇಬ್ಬರೂ ರಸ್ತೆಗುರುಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ದರೂ ದರ್ಶನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆರಂಭದಲ್ಲಿ ಅಪಘಾತ ಪ್ರಕರಣವೆಂದು ಜೆ.ಪಿ.ನಗರ ಸಂಚಾರ ಪೊಲೀಸರು ದಾಖಲಿಸಿದ್ದರೂ, ನಂತರದ ತನಿಖೆಯಲ್ಲಿ ಉದ್ದೇಶಪೂರ್ವಕ ಹತ್ಯೆ ಎಸಗಿರುವುದು ಬಹಿರಂಗವಾಗಿದೆ.
ಘಟನೆ ಬಳಿಕ ಮುಖ ಮುಚ್ಚಿಕೊಂಡು ಸ್ಥಳಕ್ಕೆ ಮರಳಿ ಕಾರಿನ ಭಾಗ ಕಿತ್ತುಕೊಂಡು ಪರಾರಿ
ಘಟನೆಯ ನಂತರ ಕಾರು ನಿಲ್ಲಿಸಿ ಸ್ಥಳದಿಂದ ಓಡಿಹೋದ ದಂಪತಿ, ಕೆಲ ಸಮಯದ ಬಳಿಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸ್ಥಳಕ್ಕೆ ಮರಳಿ ಬಂದು ಅಲ್ಲಿ ಬಿದ್ದಿದ್ದ ಕಾರಿನ ಭಾಗಗಳನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಾದ ಮನೋಜ್ ಕುಮಾರ್ ಕಳರಿಪಯಟ್ಟು ಶಿಕ್ಷಕನಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ಅಕಾಡೆಮಿ ನಡೆಸುತ್ತಿದ್ದಾನೆ. ಘಟನೆಯ ನಂತರ ಪಲಾಯನಗೊಂಡಿದ್ದ ಮನೋಜ್ ಮತ್ತು ಆರತಿ ಶರ್ಮರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.