CRIME

ಬೇರೊಬ್ಬರನ್ನು ಮದುವೆಯಾಗಲಿರುವ ಹುಡುಗಿಗೆ ಇನ್‌ಸ್ಟಾಗ್ರಾಂ ನಲ್ಲಿ ಮೆಸೇಜ್ ಮಾಡಿದ್ದಕ್ಕೆ ಯುವಕನ ಹತ್ಯೆ!

admincoorgdaily

Photo credit: TV09 (ಫೋಟೋ:ಮೃತ ಯುವಕ ಮಂಜುನಾಥ್)

ಚಿಕ್ಕಮಗಳೂರು, ಜ. 1: ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ಪದೇಪದೇ ಸಂದೇಶ ಕಳುಹಿಸಿ ಕಾಟ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಹತ್ಯೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದ್ದು, ಅವರು ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿ. ಅತ್ತಿಗನಾಳು ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿದ್ದ ಮಂಜುನಾಥ್‌ನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, ಮಂಜುನಾಥ್‌ಗೆ ಪರಿಚಿತಳಾಗಿದ್ದ ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ನಿರಂತರವಾಗಿ ಸಂದೇಶ ಕಳುಹಿಸುತ್ತಿದ್ದನು. ಆಕೆಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದು, ಈ ವಿಚಾರವನ್ನು ತಿಳಿಸಿ ಸಂದೇಶ ಕಳುಹಿಸಬಾರದೆಂದು ಯುವತಿ ತಿಳಿಸಿದ್ದಾಳೆ. ಆದರೂ ಮಂಜುನಾಥ್ ಸಂದೇಶ ಕಳುಹಿಸುವುದನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ.

ಈ ವಿಷಯವನ್ನು ಯುವತಿ ತನ್ನನ್ನು ಮದುವೆಯಾಗಲಿರುವ ವೇಣುವಿಗೆ ತಿಳಿಸಿದ್ದಾಳೆ. ನಂತರ ಮಾತನಾಡುವ ನೆಪದಲ್ಲಿ ಮಂಜುನಾಥ್‌ನ್ನು ಕರೆಸಿಕೊಂಡ ವೇಣು, ಸ್ನೇಹಿತರಾದ ಕಿರಣ್, ಅಪ್ಪು ಮತ್ತು ಮಂಜು ಜೊತೆ ಜಗಳವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.