ನಮಾಜ್‌ಗೆ ಬಂದ ಯುವಕನನ್ನು ಅಟ್ಟಾಡಿಸಿ ಚುಚ್ಚಿ ಹತ್ಯೆ: ಮೈಸೂರಿನಲ್ಲಿ ಭೀಕರ ಘಟನೆ

Nov 27, 2025 - 11:17
 0  3.4k
ನಮಾಜ್‌ಗೆ ಬಂದ ಯುವಕನನ್ನು ಅಟ್ಟಾಡಿಸಿ ಚುಚ್ಚಿ ಹತ್ಯೆ: ಮೈಸೂರಿನಲ್ಲಿ ಭೀಕರ ಘಟನೆ
Photo credit: TV09

ಮೈಸೂರು, ನ. 27: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಬುಧವಾರ ಬೆಳಗ್ಗೆ ರಕ್ತಸಿಕ್ತ ಘಟನೆ ನಡೆದಿದೆ. ಶಾಂತಿನಗರದ ಮಹಮದೀಯ ಮಸೀದಿ ಬಳಿಯ ಚೌಂಕಂಡಿ ಬಳಿ ಯುವಕನನ್ನು ಅಟ್ಟಾಡಿಸಿ ಚುಚ್ಚಿ ಹತ್ಯೆ ಮಾಡಿದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹತ್ಯೆಯಾದವರನ್ನು ಶಾಂತಿನಗರದ ಸೈಯದ್ ಸೂಫಿಯಾನ್ ಎಂದು ಗುರುತಿಸಲಾಗಿದೆ. ತಡರಾತ್ರಿ ತನಕ ಜೊತೆಗಿದ್ದ ಸ್ನೇಹಿತರಾದ ಮೊಹಮ್ಮದ್ ಸಾಕಿಬ್ ಮತ್ತು ರಾಹಿಲ್ ಬೆಳಗಿನ ನಮಾಜ್‌ಗೆ ಬಂದ ಸೂಫಿಯಾನ್ ಮೇಲೆ ದಾಳಿ ನಡೆಸಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರೂ ಒಂದೇ ಪ್ರದೇಶದವರು, ಒಂದೇ ಗುಂಪಿನಲ್ಲಿ ಸುತ್ತಾಡುತ್ತಿದ್ದವರಾಗಿದ್ದರು ಎಂದು ತಿಳಿದು ಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಲ ದಿನಗಳ ಹಿಂದೆ ಸಾಕಿಬ್‌ನ ಅಣ್ಣನ ಮೇಲೆ ಸೂಫಿಯಾನ್ ಹಲ್ಲೆ ನಡೆಸಿದ್ದ ವಿಚಾರದಿಂದ ಇವರ ನಡುವೆ ವೈಷಮ್ಯ ತಲೆದೋರಿತ್ತು. ಇದೇ ವಿಚಾರವಾಗಿ ತಡರಾತ್ರಿ ವಾಗ್ವಾದಕ್ಕೆ ತಿರುಗಿ, ಬೆಳಗ್ಗೆ ಕೊಲೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ ಶಾಂತಿನಗರದಲ್ಲಿ ಗಾಂಜಾ ಹಾಗೂ MDMA ಸೇರಿದಂತೆ ಮಾದಕ ದ್ರವ್ಯಗಳು ಎಲ್ಲೆಂದರಲ್ಲಿ ಸಿಗುತ್ತಿದ್ದು, ಆರೋಪಿಗಳು ಬಹುತೇಕ ಸಮಯ ನಶೆಯಲ್ಲೇ ತಿರುಗುತ್ತಿದ್ದರೆಂಬ ಆರೋಪ ಸಹ ಕೇಳಿ ಬರುತ್ತಿದೆ. 

ಘಟನೆಯ ನಂತರ ಸಾಕಿಬ್ ಮತ್ತು ರಾಹಿಲ್ ಪರಾರಿಯಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 2
Angry Angry 2
Sad Sad 2
Wow Wow 0