ಅಕ್ರಮ ಸಂಬಂಧದಿಂದ ದಾರುಣ ಅಂತ್ಯ ಕಂಡ ಯುವತಿ

ಅಕ್ರಮ ಸಂಬಂಧದಿಂದ ದಾರುಣ ಅಂತ್ಯ ಕಂಡ ಯುವತಿ
Photo credit: TV09

ಚಿಕ್ಕಬಳ್ಳಾಪುರ, ಜನವರಿ 07: ಸಂಬಂಧದಲ್ಲಿ ಅಣ್ಣ–ತಂಗಿಯಾಗಿದ್ದ ಇಬ್ಬರ ನಡುವೆ ಬೆಳೆದ ಅಕ್ರಮ ಸಂಬಂಧಕ್ಕೆ ದುರಂತ ಅಂತ್ಯ ಕಂಡಿದೆ. 21 ವರ್ಷದ ಯುವತಿ ರಾಮಲಕ್ಷ್ಮಿ ಮನೆ ಒಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೃತ ರಾಮಲಕ್ಷ್ಮಿ ಹಾಗೂ ಕೃಷ್ಣ ಇಬ್ಬರೂ ಚಿಕ್ಕಪ್ಪ–ದೊಡ್ಡಪ್ಪ ಮಕ್ಕಳಾಗಿದ್ದು, ಸಂಬಂಧದಲ್ಲಿ ಅಣ್ಣ–ತಂಗಿ. ಮೂಲತಃ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರ ಗ್ರಾಮದ ನಿವಾಸಿಗಳಾದ ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರೆನ್ನಲಾಗಿದೆ. ಕುಟುಂಬಸ್ಥರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದರೂ, ಇಬ್ಬರೂ ಪೆರೇಸಂದ್ರ ಗ್ರಾಮದಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ವಾಸವಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ನಡುವೆ ಕೃಷ್ಣನಿಗೆ ಕುಟುಂಬದವರು ಬೇರೆ ಯುವತಿಯೊಂದಿಗೆ ವಿವಾಹ ಮಾಡಿಸಿದ್ದರು. ಆದರೂ ರಾಮಲಕ್ಷ್ಮಿಯೊಂದಿಗೆ ಸಂಬಂಧ ಮುಂದುವರಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಂಗಳವಾರ ರಾಮಲಕ್ಷ್ಮಿ ಮನೆ ಒಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ಮೃತಳ ಅಕ್ಕ, ಈ ಸಾವಿಗೆ ಕೃಷ್ಣನೇ ಕಾರಣ ಎಂದು ಆರೋಪಿಸಿದ್ದು, ಘಟನೆ ಬಳಿಕ ಆತ ನಾಪತ್ತೆಯಾಗಿದ್ದಾನೆ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೆರೇಸಂದ್ರ ಪೊಲೀಸರು ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.