ಪ್ರೀತಿಸಿದ ಯುವಕನ ವಶೀಕರಣ ನಂಬಿಸಿ ಯುವತಿಗೆ ₹2 ಲಕ್ಷ ವಂಚನೆ

Jan 4, 2026 - 15:40
 0  854
ಪ್ರೀತಿಸಿದ ಯುವಕನ ವಶೀಕರಣ ನಂಬಿಸಿ ಯುವತಿಗೆ ₹2 ಲಕ್ಷ ವಂಚನೆ
Photo credit: TV09

ಬೆಂಗಳೂರು, ಜ. 4: ನಗರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ಆನ್‌ಲೈನ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಪ್ರೀತಿಸಿದ ಯುವಕನ ವಶೀಕರಣ ಮಾಡುವುದಾಗಿ ನಂಬಿಸಿ ಯುವತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವೇಳೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಆಮಿಷವೊಡ್ಡಿ ಮಹಿಳೆಯೊಬ್ಬರನ್ನು ವಂಚಿಸಿರುವ ಮತ್ತೊಂದು ಪ್ರಕರಣವೂ ದಾಖಲಾಗಿದೆ.

ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದ ವಶೀಕರಣ ಜಾಹೀರಾತನ್ನು ನಂಬಿದ ಯುವತಿಯೊಬ್ಬರು, ಪ್ರೀತಿಸಿದ ಯುವಕನನ್ನು ಮದುವೆಯಾಗಿಸಲು ನೆರವಾಗುವುದಾಗಿ ಹೇಳಿದ ವ್ಯಕ್ತಿಗೆ ಹಂತ ಹಂತವಾಗಿ ₹2.05 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ. ಬಳಿಕ ಇನ್ನೂ ₹4 ಲಕ್ಷ ಕೇಳಿದಾಗ ಅನುಮಾನಗೊಂಡ ಯುವತಿ ಹಣ ವಾಪಸ್ ಕೇಳಿದ್ದಕ್ಕೆ, ಆರೋಪಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪೊಲೀಸರ ಮಾಹಿತಿ ಪ್ರಕಾರ, ‘ಕೃಷ್ಣಮೂರ್ತಿ ಗುರೂಜಿ’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಲಾಗಿದ್ದು, ಅದರಲ್ಲಿ ನೀಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ ಯುವತಿಯೊಂದಿಗೆ ತನ್ನನ್ನು ಚಂದ್ರಶೇಖರ್ ಸುಗತ್ ಗುರೂಜಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ. ವಶೀಕರಣಕ್ಕೆ ಖರ್ಚು ಅಗತ್ಯವಿದೆ ಎಂದು ನಂಬಿಸಿ ಹಣ ಪಡೆದುಕೊಂಡು ನಂತರ ಸಂಪರ್ಕ ಕಡಿತಗೊಳಿಸಿದ್ದಾನೆ ಎನ್ನಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ರಿಲಯಾನ್ಸ್ ಫೈನಾನ್ಸ್ ಹೆಸರಿನಲ್ಲಿ ಕಡಿಮೆ ಬಡ್ಡಿದರದಲ್ಲಿ ₹75 ಲಕ್ಷದವರೆಗೆ ಸಾಲ ನೀಡುವುದಾಗಿ ಜಾಹೀರಾತು ನೀಡಿ ಮಹಿಳೆಯೊಬ್ಬರನ್ನು ವಂಚಿಸಲಾಗಿದೆ. ಪ್ರೊಸೆಸಿಂಗ್ ಫೀಸ್ ಹೆಸರಿನಲ್ಲಿ ಸುಮಾರು ₹30 ಸಾವಿರ ಪಡೆದರೂ ಸಾಲ ನೀಡದೆ, ಹಣ ವಾಪಸ್ ಕೇಳಿದಾಗ ಕಚೇರಿಗೆ ಬರುವಂತೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0