ಬಂಧನಕ್ಕೂ ಮುನ್ನವೇ ಜೈಲು ಸೇರಿದ ಆರೋಪಿ!

Jan 11, 2026 - 16:04
 0  1.9k
ಬಂಧನಕ್ಕೂ ಮುನ್ನವೇ ಜೈಲು ಸೇರಿದ ಆರೋಪಿ!
Photo credit: TV09 (ಜಪ್ತಿ ಮಾಡಲಾದ ಬಂಗಾರ)

ಕಲಬುರಗಿ, ಜ.11: ನಗರದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳ ತನಿಖೆ ವೇಳೆ ಕಲಬುರಗಿ ಪೊಲೀಸರಿಗೆ ಅಚ್ಚರಿಯ ಸಂಗತಿ ಎದುರಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾದ ಬೆಂಗಳೂರು ಮೂಲದ ಶಿವಕುಮಾರ್ ಅಲಿಯಾಸ್ ದಡಿಯಾ ಶಿವ, ಪೊಲೀಸರು ಬಂಧಿಸುವ ಮೊದಲೇ ಮತ್ತೊಂದು ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿರುವುದು ಬೆಳಕಿಗೆ ಬಂದಿದೆ.

ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಆರೋಪಿ ಕಲಬುರಗಿಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿದ್ದ ವೇಳೆ, ಆತ ಈಗಾಗಲೇ ಬೇರೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಬಳಿಕ ಬಾಡಿ ವಾರೆಂಟ್ ಮೂಲಕ ಆರೋಪಿಯನ್ನು ವಶಕ್ಕೆ ಪಡೆದು ಕಲಬುರಗಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ಪೊಲೀಸರ ಪ್ರಕಾರ, ಕಳೆದ ಮೇ ತಿಂಗಳಲ್ಲಿ ಹೆಂಡತಿಯ ಊರಾದ ಕಲಬುರಗಿಗೆ ಬಂದಿದ್ದ ದಡಿಯಾ ಶಿವ, ಇಲ್ಲಿ ಕೂಡ ಕಳ್ಳತನ ನಡೆಸಿದ್ದಾನೆ. ಚಂದ್ರಶೇಖರ ನಾಗಲೀಕರ್ ಅವರ ಮನೆಯಿಂದ ಸುಮಾರು 9 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವುದಲ್ಲದೆ, ವೈದ್ಯ ಚಂದ್ರಶೇಖರ್ ಅವರ ತಾಯಿ ಗುರುಬಾಯಿಯ ಮೈಮೇಲಿದ್ದ ಚಿನ್ನಾಭರಣವನ್ನೂ ದರೋಡೆ ಮಾಡಿದ್ದಾನೆ ಎನ್ನಲಾಗಿದೆ. ಚಂದ್ರಶೇಖರ್ ಪ್ರತಿದಿನ ಕ್ಲಿನಿಕ್‌ಗೆ ತೆರಳುವುದನ್ನು ಗಮನಿಸಿ, ಮನೆಯಲ್ಲಿದ್ದ ಅವರ ತಾಯಿಯನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣ ಸುಳಿವನ್ನೂ ಬಿಟ್ಟುಹೋಗದೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯ ಪತ್ತೆ ಪೊಲೀಸರಿಗೆ ಸವಾಲಾಗಿತ್ತು. ತನಿಖೆ ಮುಂದುವರಿದಂತೆ, ಆತ ಈಗಾಗಲೇ ಮತ್ತೊಂದು ಪ್ರಕರಣದಲ್ಲಿ ಜೈಲು ಸೇರಿರುವ ಸಂಗತಿ ತಿಳಿದುಬಂದಿದೆ.

ವಿಚಾರಣೆ ವೇಳೆ ದಡಿಯಾ ಶಿವನ ವಿರುದ್ಧ ಒಂದೆರಡಲ್ಲ, 40ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬಹಿರಂಗವಾಗಿದೆ. ಈ ಹಿಂದೆ ಹೆಂಡತಿಯ ತವರಿನಲ್ಲಿ ಕದ್ದ ಬಂಗಾರ ಇಡಲು ಹೋಗಿ ಸಿಕ್ಕಿಬಿದ್ದಿದ್ದ ಈತ, ಮತ್ತೆ ಅದೇ ಊರಲ್ಲಿ ಕಳ್ಳತನ ನಡೆಸಿ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಗೆ ಸಂಬಂಧಿಸಿದ ಇತರ ಪ್ರಕರಣಗಳ ತನಿಖೆ ಮುಂದುವರಿದಿದ್ದು, ಸಂಬಂಧಿತ ಇತರ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿದೆ. ಈತನ ಬಂಧನದಿಂದ ನಗರ ಹಾಗೂ ಸುತ್ತಮುತ್ತಲಿನ ಹಲವು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 2
Angry Angry 0
Sad Sad 0
Wow Wow 1