ಉಡುಪು ಕುರಿತು ಸಲಹೆ: ಮಹಿಳಾ ಗೃಹರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ; ಯುವತಿ ಬಂಧನ

ಉಡುಪು ಕುರಿತು ಸಲಹೆ: ಮಹಿಳಾ ಗೃಹರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ; ಯುವತಿ ಬಂಧನ
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.12: ಸಾರ್ವಜನಿಕ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಲು ಸಲಹೆ ನೀಡಿದ್ದ ಮಹಿಳಾ ಗೃಹರಕ್ಷಕಿಯ ಮೇಲೆ ಯುವತಿಯೊಬ್ಬಳು ಹಲ್ಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ. ಹಲ್ಲೆಯಿಂದ ಗೃಹರಕ್ಷಕಿ ಲಕ್ಷ್ಮಿ ನರಸಮ್ಮ ಅವರ ಮುಖ ಹಾಗೂ ಮೂಗಿನಿಂದ ರಕ್ತಸ್ರಾವವಾಗಿದ್ದು, ಆರೋಪಿತ ಯುವತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶುಕ್ರವಾರ ಸಂಜೆ ಕೆ.ಆರ್. ಪುರಂ ರೈಲು ನಿಲ್ದಾಣದ ಸಮೀಪ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹದೇವಪುರದ ನಾರಾಯಣಪುರ ನಿವಾಸಿ ದಾಮಿನಿ ಅಲಿಯಾಸ್ ಮೋಹಿನಿ (20) ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾಳೆ.

ಪೊಲೀಸರ ಪ್ರಕಾರ, ಯುವತಿಯ ಉಡುಪಿನ ಬಗ್ಗೆ ಕೆಲವರು ಅಶ್ಲೀಲವಾಗಿ ಮಾತನಾಡುತ್ತಿದ್ದಾಗ, ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಗೆ ಸೇರಿದ ಗೃಹರಕ್ಷಕ ದಳದ ಲಕ್ಷ್ಮಿ ನರಸಮ್ಮ ಮಧ್ಯಪ್ರವೇಶಿಸಿ ಆ ವ್ಯಕ್ತಿಗಳನ್ನು ಅಲ್ಲಿಂದ ಓಡಿಸಿದ್ದಾರೆ. ಬಳಿಕ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಜನ ಸಂಚಾರ ಇರುವುದರಿಂದ ಎಚ್ಚರಿಕೆಯಿಂದ ಇರಲು ಯುವತಿಗೆ ಸಲಹೆ ನೀಡಿದ್ದಾರೆ.

ಈ ಸಲಹೆಗೆ ಆಕ್ರೋಶಗೊಂಡ ಯುವತಿ ಲಕ್ಷ್ಮಿ ನರಸಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ. ಹಲ್ಲೆಯ ಪರಿಣಾಮವಾಗಿ ನರಸಮ್ಮ ಅವರ ಮುಖ ಮತ್ತು ಮೂಗಿನಿಂದ ರಕ್ತ ಹರಿದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೃಹರಕ್ಷಕಿ ನೀಡಿದ ದೂರಿನ ಆಧಾರದಲ್ಲಿ ದಾಮಿನಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಆದೇಶಿಸಿದೆ. ದಾಮಿನಿ ಮಾಲ್ಡೀವ್ಸ್‌ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದು, ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಬಿಬಿಎಂ ಪದವಿ ಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.