ಸರ್ವ ದೈವತಾ ಶಾಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾದಕ ವಸ್ತು ವಿರೋಧಿ ದಿನ ಜಾಗೃತಿ
admincoorgdaily

ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿರಾಜಪೇಟೆ ತಾಲೂಕಿನ ಪೊನ್ನಪೇಟೆ ವಲಯದ ಹಳ್ಳಿಗಟ್ಟು ಅರ್ವತೊಕ್ಕು ಸರ್ವ ದೈವತ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 'ಮಾದಕ ವಸ್ತು ವಿರೋಧಿ ದಿನ' ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ವ ದೈವತ ಶಾಲೆಯ ಹಿರಿಯ ಪ್ರಾಂಶುಪಾಲರಾದ ಲಲಿತ ಮೊಣ್ಣಪ್ಪ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಅರುಣ್ ಬಾನಂಗಡ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ಸದಸ್ಯರಾದ ದಯಾ ಚಂಗಪ್ಪ ಅವರು ಮಾತನಾಡಿ, "ಮಾದಕ ವಸ್ತುಗಳ ದುಷ್ಟ ಚಟಗಳು ಮಕ್ಕಳ ಭವಿಷ್ಯದ ಮೇಲೆ ಅತ್ಯಂತ ಭೀಕರ ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳು ಯಾವುದೇ ಪ್ರಲೋಭನೆಗೆ ಒಳಗಾಗದೆ, ಪೋಷಕರ ಕನಸುಗಳನ್ನು ಈಡೇರಿಸುವ ಕಡೆಗೆ ಗಮನ ಹರಿಸಬೇಕೇ ಹೊರತು ದಾರಿ ತಪ್ಪಬಾರದು" ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರುಣ್ ಬಾನಂಗಡ ಅವರು, "ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಆರ್ಥಿಕ ಸಬಲೀಕರಣ ಅಷ್ಟೇ ಅಲ್ಲದೆ, ಸಮಾಜದ ಹಿತದೃಷ್ಟಿಯಿಂದ ಪರಿಸರ ಮಾಹಿತಿ, ಸ್ವಾಸ್ಥ್ಯ ಸಂಕಲ್ಪ, ತಂಬಾಕು ವಿರೋಧಿ ಹಾಗೂ ಮಾದಕ ವಸ್ತು ವಿರೋಧಿ ಕಾರ್ಯಕ್ರಮಗಳಂತಹ ಹತ್ತಾರು ಜನಜಾಗೃತಿ ಅಭಿಯಾನಗಳನ್ನು ನಿರಂತರವಾಗಿ ನಡೆಸುತ್ತಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದು ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಗಳಾಗಬೇಕು" ಎಂದು ಕರೆ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಶೀಲಾ ಬೊಪ್ಪಣ್ಣ ಅವರು ಮಾತನಾಡಿ, "ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನಂತೆ ಪ್ರತಿ ವರ್ಷವೂ ಎಲ್ಲಾ ಶಾಲೆಗಳಲ್ಲಿ ಇಂತಹ ಅತ್ಯುನ್ನತ ಜಾಗೃತಿ ಕಾರ್ಯಕ್ರಮಗಳು ಮೂಡಿಬರುತ್ತಿರುವುದು ಶ್ಲಾಘನೀಯ" ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕೇಂದ್ರ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾದಕ ವಸ್ತುಗಳ ವಿರೋಧಿ ಅಭಿಯಾನದ ಕುರಿತು ಮಹತ್ವದ ಮಾಹಿತಿ ಮತ್ತು ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ನೇರವಾಗಿ ನೀಡಲಾಯಿತು.