ಹಿರಿಯ ಕಾರ್ಮಿಕ ಅಧಿಕಾರಿ ಹೆಸರಿನಲ್ಲಿ ಹಣ ವಸೂಲಿಗೆ ಯತ್ನ: ನಿಕಟ ವರ್ತಿಗಳಿಂದಲೇ ಆಗಿರಬಹುದು ಸುನಿಲ್ ಆರೋಪ
ಸಿದ್ದಾಪುರ: ವಿರಾಜಪೇಟೆ ತಾಲೂಕು ಹಿರಿಯ ಲೇಬರ್ ಇನ್ಸ್ಪೆಕ್ಟರ್ ಹೆಸರಿನಲ್ಲಿ ಹಣ ವಸೂಲಿಗೆ ಯತ್ನವು ನಿಕಟ ವರ್ತಿಗಳಿಂದ ಆಗಿರಬಹುದು ಎಂದು ಕಾಫಿ ನಾಡು ಕಟ್ಟಡ ಕಾರ್ಮಿಕ ಸಂಘಟನೆ (ಎಐಟಿಯುಸಿ ರಾಜ್ಯ ಸಂಯೋಜಿತ) ಜಿಲ್ಲಾಧ್ಯಕ್ಷ ಹಾಗೂ ವಕೀಲ ಕೆ.ವಿ ಸುನಿಲ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಅವರು ಕಳೆದ ಕೆಲ ತಿಂಗಳುಗಳಿಂದ ವಿರಾಜಪೇಟೆ, ಹಾಗೂ ಪೊನ್ನಂಪೇಟೆ ತಾಲೂಕುಗಳ ಹಿರಿಯ ಕಾರ್ಮಿಕ ಇನ್ಸ್ಪೆಕ್ಟರ್ ಹುದ್ದೆ ಖಾಲಿ ಇದ್ದು ಪ್ರಭಾರ ,ಸೋಮವಾರಪೇಟೆ ತಾಲ್ಲೂಕಿನ ಲೇಬರ್ ಇನ್ಸ್ಪೆಕ್ಟರ್ ಕರ್ತವ್ಯ ನಿಭಾಯಿಸುತ್ತಿದ್ದಾರೆ.ಇದನ್ನರಿತ ಇಲಾಖೆಯೊಂದಿಗೆ ನಿತ್ಯ ವ್ಯವಹರಿಸುವ ವ್ಯಕ್ತಿಗಳಿಂದ ಈ ಕೃತ್ಯದಲ್ಲಿ ಶಾಮಿಲಾಗಿರುವ ಸಂಶಯವಿದೆ.
ಕಟ್ಟಡ ಕಾರ್ಮಿಕರ ಕಾರ್ಡ್ ಸೇರಿದಂತೆ ಇನ್ನಿತರ ಕಾರ್ಮಿಕರ ಕಾರ್ಡ್ ಮಾಡಿಸಿಕೊಡುವ ಏಜೆಂಟ್ ಗಳು ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿದ್ದು ನೊಂದಣಿ ಇಲ್ಲದೆ ಈ ರೀತಿ ಏಜೆಂಟರುಗಳನ್ನು ಪೋಷಿಸುತ್ತಿರುವ ಕಾರ್ಮಿಕ ಇಲಾಖೆಯೆ ಇದಕ್ಕೆ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.
ಅಖಿಲ ಭಾರತ ಮಟ್ಟದ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಹಕ್ಕು,ಸೌಲಭ್ಯಗಳನ್ನು ರಕ್ಷಿಸಿ ಕೊಡಿಸುವ ಕೆಲಸ ಮಾಡುತ್ತಿದ್ದು ಭ್ರಷ್ಟಾಚಾರ ವಿರುದ್ಧದ್ದ ಹೋರಾಟಗಳನ್ನು ಮಾಡುತ್ತಿದೆ. ಇಂತಹ ಹೋರಾಟಗಳನ್ನು ಹತ್ತಿಕ್ಕುವ ಭಾಗವಾಗಿ ನೊಂದಾಯಿತ ಸಂಘಟನೆಗಳನ್ನು
ಅಸ್ಥಿರಗೊಳಿಸಲು ಇಲಾಖೆಯು ಏಜೆಂಟರುಗಳನ್ನು ಪೋಷಿಸುತ್ತಿದ್ದು ಸಣ್ಣ ಪುಟ್ಟ ಸಂಘಟನೆಗಳು ಅಥವಾ ಏಜೆಂಟರು ಈ ಸಲುಗೆ ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಅವರು,ಈ ವಿಷಯದಲ್ಲಿ ಕಾರ್ಮಿಕ ಇಲಾಖೆ ಅಸಡ್ಡೆ ತೋರದೆ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ವಿಧಿಸ ಬೇಕು ಎಂದು ಒತ್ತಾಯಿಸಿದ್ದಾರೆ.